ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ

2025

ರಮಣಶ್ರೀ ಶರಣ ಜೀವಮಾನ ಸಾಧನ ಸನ್ಮಾನ

ಡಾ|| ಜಿ.ವಿ. ಜಯ ರಾಜಶೇಖರ

ಡಾ॥ ಜಿ.ವಿ. ಜಯ ರಾಜಶೇಖರ ಅವರು ಖ್ಯಾತ ಲೇಖಕಿಯಾಗಿ ಕವಯಿತ್ರಿ, ಗಮಕಿಯಾಗಿ ಕೂಡ ಸಾಹಿತ್ಯದ ಹಲವಾರು ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ್ದಾರೆ. 12.10.1933ರಲ್ಲಿ ಜನಿಸಿದ ಇವರು, ಜಿ.ಎಸ್. ಮರುಳಯ್ಯ ಹಾಗೂ ಮಹದೇವಮ್ಮನವರ ಮುದ್ದಿನ ಮಗಳಾಗಿ ಬೆಳೆದು ಈ ನಾಡಿನ ಹೆಮ್ಮೆಯ ಸಾಧಕಿಯರಾಗಿದ್ದಾರೆ. ಡಾ.ಯ.ಲೆ. ರಾಜಶೇಖರ್ ಅವರ ಧರ್ಮಪತ್ನಿಯಾಗಿ ಮಕ್ಕಳ ಲಾಲನೆ ಪಾಲನೆ ಮಾಡುತ್ತಾ ಕೌಟುಂಬಿಕ ಜೀವನದೊಂದಿಗೆ ಸಾಹಿತ್ಯ, ಶಿಕ್ಷಣ, ಸಂಗೀತ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಪ್ರತಿಭಾವಂತ ಕವಯತ್ರಿಯಾದ ಇವರು ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಅನೇಕ ನಾಟಕಗಳು, ಭಾಷಣ, ವಿಚಾರ ಸಂಕಿರಣ, ಚಿಂತನ, ಸಂದರ್ಶನ, ಗಾಯನ, ಮತ್ತು ಶೂನ್ಯ ಸಂಪಾದನೆ, ವಾಚನ ವ್ಯಾಖ್ಯಾನಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಹಾಗೂ ಮಹಾದೇವಿಯಕ್ಕರವರ, ಮುಕ್ತಾಯಕ್ಕರವರ ಸಂಪಾದನೆ, ಪ್ರಭುದೇವರ ಆರೋಗಣೆ ವಾಚನ ಹಾಗೂ ವ್ಯಾಖ್ಯಾನ ಎಂದೆಂದಿಗೂ ಜನಮನ್ನಣೆ ಪಡೆದಿದ್ದು, ಈಗ ಸಿ.ಡಿ.ಯ ಮುಖಾಂತರ ಕೇಳಬಹುದಾಗಿದೆ.

ಗಮಕ ಕಲಾ ನಿಧಿ(ಸಂ), ಶೂನ್ಯ ಸಂಪಾದನೆ ಸಂಗ್ರಹ, ಶೂನ್ಯ ಸಂಪಾದನೆಯಲ್ಲಿ ಸ್ತ್ರೀ ಪಾತ್ರಗಳು, ಮೊಗ್ಗೆಯ ಮಾಯಿ ದೇವರ ಶತಕತ್ರಯ, ರೇಡಿಯೋ ನಾಟಕಗಳು, ಪುಟಾಣಿಗೆ ಪುರಾಣ ಕಥೆಗಳು, ಪುಟಾಣಿಗೆ ಶರಣ ಕಥೆಗಳು, ಎಲೆ ಮಲ್ಲಪ್ಪ ಶೆಟ್ಟರು (ಜೀವನ ಚರಿತ್ರೆ) ಮರಳಿ ಬಂದ ಮಧುರ ಮಾಸ (ಪ್ರವಾಸ ಕಥನ) ಸರ್ಪಭೂಷಣ ಶಿವಯೋಗಿಗಳ ಆಯ್ದ ಹಾಡುಗಳು ಅಕ್ಕಮಹಾದೇವಿ (ಜೀವನ ಚರಿತ್ರೆ) ಸ್ಮೃತಿ ಬಿಂಬ(ಆತ್ಮಕಥೆ) ರಚಿಸಿದ್ದಾರೆ. ಬಸವ ತತ್ವ ಆರಾಧಕರಾಗಿ, ಜಾತ್ಯಾತೀತ ನಿಲುವುಗಳಿಂದ ರಾಜ್ಯದಲ್ಲಿ ಆಪಾರ ಜನ ಮನ್ನಣೆ ಗಳಿಸಿದ್ದಾರೆ. ಅತ್ತಿಮಬ್ಬೆ ಪ್ರಶಸ್ತಿ, ಬಸವಜ್ಯೋತಿ ಪ್ರಶಸ್ತಿ, ಕರ್ನಾಟಕ ಪದ್ಮಶ್ರೀ, ಗುರುಬಸವಶ್ರೀ ಸಿದ್ದಗಂಗಾ ಶಿವಕುಮಾರಶ್ರೀ ಪ್ರಶಸ್ತಿ, ವಚನ ಸಾಹಿತ್ಯಶ್ರೀ, ಸ್ವರಲಿಪಿ ಪ್ರತಿಷ್ಠಾನ ಗಾಯನ ಸಮಾಜದಿಂದ ಸಾಹಿತ್ಯ ಸರಸ್ವತಿ 2021…..ಹೀಗೆ ಕರ್ನಾಟಕದಿಂದ ಅಮೆರಿಕವರೆಗೂ ಹಲವಾರು ಸನ್ಮಾನಗಳು ಇವರಿಗೆ ಸಂದಿವೆ. 92ರ ಈ ವಯೋಮಾನದಲ್ಲಿಯೂ ಅವರ ಜೀವನೋತ್ಸಾಹ ಮತ್ತು ಶರಣ ಸಾಹಿತ್ಯ ರಚನೆಯ ಬಗ್ಗೆ ಅವರು ತೋರುತ್ತಿರುವ ಆಸಕ್ತಿ ಅಭಿನಂದನಾರ್ಹ. ಶರಣ ಸಾಹಿತ್ಯ ಕ್ಷೇತ್ರಕ್ಕೆ ಇವರು ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ ಇವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ 2025ನೇ ಸಾಲಿನ “ರಮಣಶ್ರೀ ಶರಣ ಜೀವಮಾನ ಸಾಧನೆ ಪ್ರಶಸ್ತಿ” ನೀಡಿ ಸನ್ಮಾನಿಸಲು ಅಭಿಮಾನ ಪಡುತ್ತದೆ.

ಇವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ಪರವಾಗಿ ಹೃತೂರ್ವಕ ಅಭಿನಂದನೆಗಳು.

ರಮಣಶ್ರೀ ಶರಣ ವಿಶೇಷ ಪುರಸ್ಕಾರ

ಕು. ಪ್ರಿಯಾಂಕಾ ಪ್ರವೀಣ

ವಿಶೇಷ ಪ್ರೋತ್ಸಾಹ ಪುರಸ್ಕಾರ

ಕು. ಪ್ರಿಯಾಂಕಾ ಪ್ರವೀಣ ಹಾವೇರಿ, ಅವರು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುತ್ತಾರೆ. ಐದನೇ ವರ್ಷದವರಿದ್ದಾಗ ಪಂ.ಮಾತಾರ್ಂಡಪ್ಪ ಸಂತೂಬಾಳ ಅವರ ಬಳಿ ಸಂಗೀತ ಅಭ್ಯಾಸವನ್ನು 12 ವರ್ಷಗಳ ಕಾಲ ಮಾಡಿದರು. ಸಂಗೀತ ವಿದ್ವತ್, ಸಂಗೀತ ವಿಶಾರದಾ ಪರೀಕ್ಷೆಗಳನ್ನು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಧಾರವಾಡ ಆಕಾಶವಾಣಿಯ ಬಿ ಗ್ರೇಡ್ ಕಲಾವಿದರಾಗಿದ್ದಾರೆ. ಇವರು ಚಂದನವಾಹಿನಿಯ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮ, ಧಾರವಾಡದ ರಂಗಾಯಣದಲ್ಲಿ ‘ಸ್ವರಾಮೃತ’ ಬೆಂಗಳೂರು ಬಾಲ ಭವನದಲ್ಲಿ ಕಲಾಶ್ರೀ, ಗದಗ ಉತ್ಸವ, ಯುವಜನ ಮೇಳ, ಶರಣ ಸಾಹಿತ್ಯ ಪರಿಷತ್ತಿನ ವೇದಿಕೆ ಹಾಗೂ ಇನ್ನು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ. ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡೆಮಿಯವರು ಕೊಡುವ ಶಿಷ್ಯವೇತನವನ್ನು ಹಿಂದೂಸ್ಥಾನಿ ಸಂಗೀತ ಮತ್ತು ಸುಗಮ ಸಂಗೀತದಲ್ಲಿ ಪಡೆದಿರುತ್ತಾರೆ.

ಇವರ ಸಾಧನೆಗೆ ಗಾನಶ್ರೀ ರತ್ನ. ಕರುನಾಡ ಚೇತನ, ಅಸಾಧಾರಣ ಪ್ರತಿಭೆ, ಸುಕೃತಿಮಾ, ಗಾನಕೋಗಿಲೆ ಹಾಗೂ ಇನ್ನೂ ಅನೇಕ ಪ್ರಶಸ್ತಿಗಳು ಬಂದಿದೆ. ಇವರ ವಚನ ಸಂಗೀತ ಸಾಧನೆಯನ್ನು ಗುರುತಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ 2025ನೇ ಸಾಲಿನ “ರಮಣಶ್ರೀ ಶರಣ ವಿಶೇಷ ಪ್ರೋತ್ಸಾಹ ಪುರಸ್ಕಾರ” ನೀಡಿ ಸನ್ಮಾನಿಸಲು ಅಭಿಮಾನ ಪಡುತ್ತದೆ.

ಇವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ಪರವಾಗಿ ಹೃತೂರ್ವಕ ಅಭಿನಂದನೆಗಳು.

ರಮಣಶ್ರೀ ಶರಣ ಪ್ರಶಸ್ತಿಗಳು

ಹಿರಿಯ ಶ್ರೇಣಿ

ಶರಣ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಲೇಖಕರನ್ನು ಸನ್ಮಾನಿಸಲಾಯಿತು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರ

ಡಾ. ವಿಜಯಶ್ರೀ ಸಬರದ

1957ರಲ್ಲಿ ಬೀದರನ ಶ್ರೀ ಗುಣವಂತರಾವ ಪಾಟೀಲ ಮತ್ತು ಶ್ರೀಮತಿ ಸಂಗಮ್ಮ ಪಾಟೀಲರ ಮೊದಲನೇ ಮಗಳಾಗಿ ಜನಿಸಿದ ವಿಜಯಶ್ರೀಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಕನ್ನಡದಲ್ಲಿ ಪ್ರಥಮ ದರ್ಜೆಯಲ್ಲಿ ಉತೀರ್ಣರಾದರು. 1978ರಲ್ಲಿ ಪ್ರಖ್ಯಾತ ಸಾಹಿತಿಗಳಾದ ಡಾ. ಬಸವರಾಜ ಸಬರದ ಅವರನ್ನು ವಿವಾಹವಾದರು. 1991ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ “ಅನುಪಮ ನಿರಂಜನರ ಕಾದಂಬರಿಗಳು” ಎಂಬ ತಮ್ಮ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದರು.

ಬೀದರನ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ, ಗುಲ್ಬರ್ಗಾ ವಿಶ್ವವಿದ್ಯಾಲಯ, ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ಮಹಿಳಾ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ವಿಶ್ವವಿದ್ಯಾಲಯಗಳ ನೇಮಕಾತಿ ಸಮಿತಿ ಸದಸ್ಯರಾಗಿ, ಅಭ್ಯಾಸ ಮಂಡಳಿಗಳ ಅಧ್ಯಕ್ಷರಾಗಿ, ಕಾಲೇಜು ತಪಾಸಣಾ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಇವರು, ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆಗೈದಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ವಿಜಯಶ್ರೀಯವರು ಇಪ್ಪತ್ತು ಸ್ವತಂತ್ರ ಕೃತಿಗಳನ್ನು, ಇಪ್ಪತ್ತು ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ. ಮಹಿಳಾ ವಿಶ್ವವಿದ್ಯಾಲಯದ ಶಾಸ್ತ್ರೀಯ ಭಾಷಾ ಯೋಜನೆಯಡಿಯಲ್ಲಿ ಆಧುನಿಕ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆಯ ಐದು ಸಂಪುಟಗಳನ್ನು ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ಶಾಸ್ತ್ರೀಯ ಭಾಷಾ ಯೋಜನೆಯಡಿಯಲ್ಲಿ ರಂಗಭೂಮಿಗೆ ಸಂಬಂಧಿಸಿದ ಎರಡು ಸಂಪುಟಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ.

ಧಾರವಾಡದ ರತ್ನಮ್ಮ ಹೆಗ್ಗಡೆ ಬಹುಮಾನ, ಮೈಸೂರಿನ ಸಾಹಿತ್ಯಶ್ರೀ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ಸಿಂಧೂರ ದತ್ತಿ ಪ್ರಶಸ್ತಿ, ಹಾಗೂ ಗೋವಿಂದರಾಜ ದತ್ತಿ ನಿಧಿ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅಂತರರಾಷ್ಟ್ರೀಯ ಮಹಿಳಾ ಪ್ರಶಸ್ತಿ, ನಿಡುಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ದತ್ತಿ ನಿಧಿ ಪ್ರಶಸ್ತಿ, ಗಿರಿಜಾ ದತ್ತಿನಿಧಿ ಪ್ರಶಸ್ತಿ ಹಾಗೂ ಶರಣಸಾಹಿತ್ಯ ಪರಿಷತ್ತಿನ ಕದಳಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ, ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

ಇವರ ಕೃತಿಗಳು ಸ್ನಾತಕ- ಸ್ನಾತಕೋತ್ತರ ತರಗತಿಗಳಿಗೆ ಪಠ್ಯಪುಸ್ತಕಗಳಾಗಿದ್ದು, ಹೀಗೆ ಭಾಷೆ, ಸಾಹಿತ್ಯ. ಸಂಸ್ಕೃತಿಗಳಿಗೆ ಇವರಿಂದ ಅನನ್ಯ ಸೇವೆ ಸಂದಿದೆ. ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನೆಗಾಗಿ ಇವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ 2025ನೇ ಸಾಲಿನ “ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ” ನೀಡಿ ಸನ್ಮಾನಿಸಲು ಅಭಿಮಾನ ಪಡುತ್ತದೆ.

ಇವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ಪರವಾಗಿ ಹೃತೂರ್ವಕ ಅಭಿನಂದನೆಗಳು.

ಆಧುನಿಕ ವಚನ ರಚನೆ

ಪ್ರೊ. ಎಚ್. ಲಿಂಗಪ್ಪನವರು

ಪ್ರೊ. ಎಚ್ ಲಿಂಗಪ್ಪರವರು 1955ರಲ್ಲಿ(ಅಂದಿನ ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಈಗಿನ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು) ತೋರಣಗಟ್ಟೆ ಗ್ರಾಮದ ದಂಪತಿಗಳಾದ ಶ್ರೀ ಹೊನ್ನೂರಪ್ಪ ಮತ್ತು ಶ್ರೀಮತಿ ಹನುಮಕ್ಕ ಇವರ ಹಿರಿಯ ಮಗನಾಗಿ ಜನಿಸಿದರು. ಅಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಿದ ಇವರು ಪ್ರೌಢಶಿಕ್ಷಣವನ್ನು ಜಗಳೂರು, ಪದವಿ ಪೂರ್ವ ಮತ್ತು ಪದವಿಯನ್ನು ಚಿತ್ರದುರ್ಗದಲ್ಲಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಬಿ.ಆರ್.ಪ್ರಾಜೆಕ್ಟಲ್ಲಿ 1977-79 ರಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಎಂ.ಎ ಪದವಿ ಪಡೆದರು. 1980 ರಿಂದ 2015 ರವರೆಗೆ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ, ಮೂರುವರೆ ದಶಕಗಳ ಕಾಲ ಅಧ್ಯಾಪಕರಾಗಿ ಚಿತ್ರದುರ್ಗ, ಬಿಳಿಚೋಡು, ಹೊಸದುರ್ಗ, ಅಕ್ಕಿಆಲೂರು, ಚಳ್ಳಕೆರೆ ಮತ್ತು ಚನ್ನಗಿರಿಯಲ್ಲಿ ಸೇವೆ ಸಲ್ಲಿಸಿದರು. ಮೈಸೂರು, ಕುವೆಂಪು, ಧಾರವಾಡ ಮತ್ತು ದಾವಣಗೆರೆ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷಕರಾಗಿ, ಪರೀಕ್ಷಾ ಮಂಡಳಿಯ ಸದಸ್ಯರಾಗಿ, ಪಠ್ಯವಿಷಯ ಸದಸ್ಯರಾಗಿ ಮತ್ತು ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಮಾಹಿತಿ ಕೋಶದ ಸದಸ್ಯರಾಗಿ, ಚಿತ್ರದುರ್ಗ ಜಿಲ್ಲೆಯ ಕೇಂದ್ರ ಗ್ರಂಥಾಲಯದ ಪ್ರಾಧಿಕಾರದ ಸದಸ್ಯರಾಗಿ, ಕಾರ್ಯ ನಿರ್ವಹಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಈವರೆಗೆ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ ವಿಶೇಷವಾಗಿ ಬುದ್ಧ ಬಸವ, ಅಂಬೇಡ್ಕರ್ ಅನುಭಾವಿ ವಚನಕಾರರು, ಶಿವಶರಣೆಯರನ್ನು ಕುರಿತು ಬರೆದಿದ್ದಾರೆ ಹಾಗೂ ಚಿಂತನೆಯನ್ನು ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಮೂರು ಅಭಿನಂದನ ಗ್ರಂಥಗಳ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ಇವರ ಇನ್ನೂರಕ್ಕೂ ಹೆಚ್ಚು ಲೇಖನಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿಜೀವನದ ಆರಂಭದ ಜೊತೆ ಜೊತೆಯಲ್ಲಿಯೇ ಸಮಾಜಮುಖಿ ಚಿಂತನೆಯ ಹೋರಾಟದ ಜೊತೆಗೆ ದಲಿತ ಮತ್ತು ಬಂಡಾಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ ಸಾಹಿತ್ಯ, ಸಂಸ್ಕೃತಿ-ಭಾಷೆ, ಕುರಿತ ಬರವಣಿಗೆಯನ್ನು ಜೀವದುಸಿರಾಗಿಸಿಕೊಂಡಿದ್ದಾರೆ. ಇವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ 2025ನೇ ಸಾಲಿನ “ರಮಣಶ್ರೀ ಶರಣ ಹಿರಿಯ ಶ್ರೇಣಿ” ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ತಮಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ಪರವಾಗಿ ಹೃತೂರ್ವಕ ಅಭಿನಂದನೆಗಳು.

ವಚನ ಸಂಗೀತ ಕ್ಷೇತ್ರ

ಡಾ. ಜಯದೇವಿ ಜಂಗಮ ಶೆಟ್ಟಿ

ಡಾ ಜಯದೇವಿ ಜಂಗಮಶೆಟ್ಟಿಯವರು ಹೆಸರಾಂತ ಸಂಗೀತಗಾರ್ತಿ, ಪ್ರಾಧ್ಯಾಪಕಿ ಮತ್ತು ಬರಹಗಾರ್ತಿ. ಮೂಲತಃ ಇವರು ರಾಯಚೂರಿನವರು. ಸಂಗೀತದ ವಿದ್ಯಾಭ್ಯಾಸವನ್ನು ಧಾರವಾಡದಲ್ಲಿ ಮಾಡಿ ಸಂಗೀತದಲ್ಲಿ ವಿದ್ವತ್, ವಿಶಾರದಾ ಪದವೀಧರೆ. ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ‘ವಚನಗಾಯನ ಪರಂಪರೆ ಒಂದು ಸಂಗೀತಾತ್ಮಕ ಅಧ್ಯಯನ’ (ವಚನ ಗಾಯನ ಪರಂಪರೆಯ ನೆಲೆ ನಿಲುವುಗಳು)ವಿಷಯದ ಮೇಲೆ ಮಂಡಿಸಿದ ಮಹಾಪ್ರಬಂಧಕ್ಕೆ ಪಿ.ಹೆಚ್.ಡಿ ಪದವಿ ಸಂದಿದೆ. ಡಾ. ಜಯದೇವಿಯವರು ಪಂಡಿತ್ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ವಿದುಷಿ ಜಯಶ್ರೀ ಪಾಟೆಕರ್, ಪಂಡಿತ್ ರಾಜಶೇಖರ ಮನಸೂರ್ ಅವರಲ್ಲಿ ಸಂಗೀತ ಅಭ್ಯಾಸ ಮಾಡಿದ್ದಾರೆ. ಇವರು ಭಾರತಾದ್ಯಂತ ಮತ್ತು ವಿದೇಶಗಳಲ್ಲಿಯೂ ಸಹ ಸಂಗೀತ ಗಾಯನ ಕಾರ್ಯಕ್ರಮಗಳನ್ನು ನೀಡಿ ಹೆಸರಾಗಿದ್ದಾರೆ. 2019 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ‘ರಾಗಭೈರವಿ’ ಗೆ ಇವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಲನಚಿತ್ರಕ್ಕೆ ಕರ್ನಾಟಕ ಸರಕಾರದ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಲಭಿಸಿದೆ. ಶಾಸ್ತ್ರೀಯಗಾಯನ, ವಚನಗಾಯನ, ದಾಸವಾಣಿ ಮತ್ತು ಭಜನ್ ಸಂಗೀತದಲ್ಲಿ ಇವರ ಅನೇಕ ಆಲ್ಬಂಗಳು ಬೆಂಗಳೂರಿನ ಪ್ರತಿಷ್ಠಿತ ಲಹರಿ ಕಂಪನಿಯಿಂದ ಬಿಡುಗಡೆಗೊಂಡು ಖ್ಯಾತಿ ಗಳಿಸಿವೆ. ಜಯದೇವಿ ಜಂಗಮಶೆಟ್ಟಿ ಅವರು ಕಲಬುರ್ಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಡಾ. ಮಲ್ಲಿಕಾರ್ಜುನ್ ಮನ್ಸೂರ್ ಯುವ ರಾಷ್ಟ್ರೀಯ ಪುರಸ್ಕಾರ, ವಚನ ಗಾಯನಕ್ಕಾಗಿ ರಮಣಶ್ರೀ ಸಂಗೀತ ಪ್ರಶಸ್ತಿ, ವಚನ ಸಂಗೀತ ರತ್ನ ಪಂಡಿತ್ ಸಿದ್ದರಾಮ ಜಂಬಲದಿನ್ನಿ ಪ್ರಶಸ್ತಿ, ಬಸವ ವೇದಿಕೆಯಿಂದ “ವಚನ ಸಾಹಿತ್ಯಶ್ರೀ ಪ್ರಶಸ್ತಿ”, ಕರ್ನಾಟಕ ಸರಕಾರದ ಬಾಲ ವಿಕಾಸ ಅಕಾಡೆಮಿಯಿಂದ ಸಾಂಸ್ಕೃತಿಕ ಗುರು ಪ್ರಶಸ್ತಿ, ರಾಜ್ಯಮಟ್ಟದ ಅಮ್ಮ ಪ್ರಶಸ್ತಿ, ಚೆನ್ನೈನ ‘ಭಾರತ ರತ್ನ ಬಿಸ್ಮಿಲ್ಲಾಖಾನ್’ ಯುವ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ವಚನ ಸಂಗೀತ ಪ್ರಶಸ್ತಿ, ಬೆಂಗಳೂರಿನ ಪ್ರತಿಷ್ಠಿತ ಸಂಸ್ಕೃತಿ ಸಂಗಮ ಪ್ರಶಸ್ತಿ, ‘ಉಲಿವನಾದ ಚರಣ’ ಕೃತಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅತ್ಯುತ್ತಮ ಪುಸ್ತಕ ಬಹುಮಾನ ಸೇರಿದಂತೆ ಅನೇಕ ಗೌರವಗಳು ಸಂದಿವೆ. ಇವರು ಆಕಾಶವಾಣಿ ಮತ್ತು ದೂರದರ್ಶನದ ಹಿಂದುಸ್ತಾನಿ ಶಾಸ್ತ್ರೀಯ, ಸುಗಮಸಂಗೀತ ಮತ್ತು ಸುಗಮ ಸಂಗೀತದ ಸಂಯೋಜಕಿ ಕಲಾವಿದೆಯೂ ಹೌದು.

ಇವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ 2025ನೇ ಸಾಲಿನ ವಚನ ಸಂಗೀತ ಕ್ಷೇತ್ರದ ಸಾಧನೆಗಾಗಿ “ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ” ನೀಡಿ ಸನ್ಮಾನಿಸಲು ಅಭಿಮಾನ ಪಡುತ್ತದೆ.

ಇವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ಪರವಾಗಿ ಹೃತ್ತೂರ್ವಕ ಅಭಿನಂದನೆಗಳು.

ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ

ಶ್ರೀ ಪಿನಾಕಪಾಣಿ, ವಚನಜ್ಯೋತಿ ಬಳಗ ಸಂಸ್ಥೆ ಅಧ್ಯಕ್ಷರು

ಅಚ್ಚ ಕನ್ನಡದ ಸ್ವಚ್ಛ ಮತ್ತು ಸ್ವತಂತ್ರ ಬೇಸಾಯವಾದ ವಚನಗಳನ್ನು ಮನೆ – ಮನಗಳಿಗೆ ತಲುಪಿಸುವ ಮತ್ತು ಸಾಂಸ್ಕೃತಿಕ ಮಹತ್ತಾದ ವಚನ ಸಂಸ್ಕೃತಿಯನ್ನು ಪ್ರಚಾರಪಡಿಸುವ ದ್ವೇಯೋದ್ಧೇಶದಿಂದ ವಚನ ಜ್ಯೋತಿ ಪತ್ರಿಕೆಯ ಮೂಲಕ 1996 ಮೇ 19ರಂದು ಆರಂಭವಾದ ವಚನಜ್ಯೋತಿ ಬಳಗ ಕಳೆದ ಇಪ್ಪತ್ತೆಂಟು ವರ್ಷಗಳಿಂದ ಶ್ರೀ ಪಿನಾಕಪಾಣಿ ಅವರ ಸಾರಥ್ಯದಲ್ಲಿ ನಿರಂತರವಾಗಿ ವರುಷವಿಡಿ ತನ್ನ ನಿರಂತರ ವಚನಾಧಾರಿತ ಕಾರ್ಯಕ್ರಮಗಳು ಮತ್ತು ಆ ಕಾರ್ಯಕ್ರಮಗಳ ನಾವೀನ್ಯತೆ ಮತ್ತು ವೈಶಿಷ್ಟ್ಯತೆಯಿಂದ ಕರ್ನಾಟಕದ, ವಿಶೇಷವಾಗಿ ರಾಜಧಾನಿ ಬೆಂಗಳೂರಿನ ಸಾಂಸ್ಕೃತಿಕ – ಸಾಹಿತ್ಯಕ ವಲಯದಲ್ಲಿ ವಿಶಿಷ್ಟ ಹೆಸರನ್ನು ಪಡೆದಿದೆ. “ವಚನಾಮೃತವರ್ಷಿಣಿ ಮಹೋತ್ಸವ” ವಚನ ಸಂಜೆ, ವಚನ ಮುಂಜಾನೆ, ಗ್ರಾಮಾಂತರ ವಚನ, ಸಂಜೆ, ವಚನ ಬೆಳಕು, ವಚನ ಸಂಕ್ರಾಂತಿ, ವಚನ ಫಾಲ್ಗುಣ, ವಚನ ಮುಂಗಾರು, ವಚನ ಸಂಭ್ರಮ, ವಚನ ಶ್ರಾವಣ, ವಚನ ನವರಾತ್ರಿ, ವಚನ ದಸರಾ, ವಚನ ಕಾರ್ತಿಕ…… ಹೀಗೆ ವಚನ ಪರಂಪರೆಯನ್ನು ಮನೆ-ಮನಕ್ಕೆ ಮುಟ್ಟಿಸುವ ಬಳಗದ ಪ್ರಯೋಗಾತ್ಮಕ ಕಾಠ್ಯಕ್ರಮಗಳು, “ವಚನ ಸಂಗೀತ ಯುಗಾದಿ”, “ಶಾಲೆಯಿಂದ ಶಾಲೆಗೆ ವಚನ ಜ್ಯೋತಿ; ಕನ್ನಡ ಸಂಸ್ಕೃತಿ ಸಂಚಾರ” ಹೀಗೆ ವಚನ ಸಾಹಿತ್ಯ ಪ್ರಸಾರದ ದಿಸೆಯಲ್ಲಿ ಈ ಸಂಸ್ಥೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಶರಣ ಸಾಹಿತ್ಯದ ಬಗ್ಗೆ ಇರುವ ಶ್ರದ್ಧಾ ಭಕ್ತಿಯನ್ನು ನಿರೂಪಿಸುತ್ತದೆ.

ಬಸವ ಜಯಂತಿಯನ್ನು “ಬಸವಣ್ಣನೊಡನೆ ಹೆಜ್ಜೆ ಹಾಕೋಣ ಬನ್ನಿರಿ – ಬಸವ ಉತ್ಸವ” 1997ರಲ್ಲಿ ಆರಂಭಿಸಿದ “ವಚನಾಮೃತವರ್ಷಿಣಿ ಮಹೋತ್ಸವ” 2017ರಲ್ಲಿ ಮಕ್ಕಳ ವಚನ ಮೇಳವಾಗಿ ರೂಪಾಂತರಗೊಂಡು ಶಿಶುವಿಹಾರದಿಂದ ಹತ್ತನೇ ತರಗತಿಯವರೆಗಿನ ಮಕ್ಕಳಿಗಾಗಿ ವಚನ ಗಾಯನ, ವಚನ ಪ್ರಬಂಧ, ವಚನ ವಿವೇಚನ, ವಚನ ಚಿತ್ರ, ವಚನ ರಸಪ್ರಶ್ನೆ, ವಚನ ಅಂತ್ಯಾಕ್ಷರಿ, ವಚನ ರೂಪಕ, ವಚನ ನೃತ್ಯ, ವಚನ ಕಂಠಪಾಠ, ವಚನ ಕಥೆ, ವಚನ ವೇಷಭೂಷಣ, ಸಮೂಹ ವಚನ ಗಾಯನ.. ಹೀಗೆ 12 ಪ್ರಕಾರಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಸಂಸ್ಕೃತಿಯ ಅರಿವನ್ನು ಉಂಟು ಮಾಡುವ ಮೂಲಕ ಶರಣ ಸಾಹಿತ್ಯ ಪ್ರಸಾರಕ್ಕೆ ಈ ಸಂಸ್ಥೆ ಸಲ್ಲಿಸಿರುವ ಸೇವೆ ಅಭಿನಂದನಾರ್ಹ. ಹತ್ತಾರು ಕನಸುಗಳು ಹೊಂದಿರುವ ವಚನಜ್ಯೋತಿ ಬಳಗ ತುಮಕೂರಿನ ಹಿರೇಹಳ್ಳಿ ಬಳಿಯ ಕೇತೋಹಳ್ಳಿಯಲ್ಲಿರುವ ಬಳಗದ ಸಂಸ್ಥಾಪಕರಾದ ಪಂಡಿತ ಕೆ.ಪಿ. ಶಿವಲಿಂಗಯ್ಯನವರ ಪಿತ್ರಾರ್ಜಿತ ಭೂಮಿಯಲ್ಲಿ “ವಚನಲೋಕ”ವನ್ನು ಕಟ್ಟುವ ಕನಸನ್ನು ಹೊಂದಿದೆ. ಶರಣ ಸಂಸ್ಕೃತಿ ಪ್ರಸಾರ ಕ್ಷೇತ್ರದ ಸಾಧನೆಗಾಗಿ “ವಚನ ಜ್ಯೋತಿ ಬಳಗ ಬೆಂಗಳೂರು” ಇವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ 2025ನೇ ಸಾಲಿನ “ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ” ನೀಡಿ ಸನ್ಮಾನಿಸಲು ಅಭಿಮಾನ ಪಡುತ್ತದೆ.

ಈ ಸಂಸ್ಥೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ಪರವಾಗಿ ಹೃತೂರ್ವಕ ಅಭಿನಂದನೆಗಳು.

ರಮಣಶ್ರೀ ಶರಣ ಪ್ರಶಸ್ತಿಗಳು

ಉತ್ತೇಜನ ಪ್ರಶಸ್ತಿ

ಶರಣ  ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮಾರ್ಗವನ್ನು ತೋರಿದ ಮತ್ತು ಇತರರಿಗೆ ಪ್ರೇರೇಪಿಸುವ ವ್ಯಕ್ತಿಗಳನ್ನು ಗೌರವಿಸಲಾಯಿತು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರ

ಡಾ. ಉಷಾದೇವಿ ಹಿರೇಮಠ

ಡಾ. ಉಷಾದೇವಿ ಹಿರೇಮಠ ಅವರು ಮೂಲತಃ ಗದಗ ಜಿಲ್ಲೆಯ ಲಕ್ಷ್ಮೀಶ್ವರದವರು. ತಂದೆ ಲಿಂ. ಜಗದೇವಯ್ಯ ತಾಯಿ ಶ್ರೀಮತಿ ಗೌರಾದೇವಿ ಹಿರೇಮಠ, ಉಷಾದೇವಿ ಅವರು 2006ರಲ್ಲಿ ಸ್ನಾತಕೋತ್ತರದಲ್ಲಿ ಕನ್ನಡ ಎಂ.ಎ ಪದವಿ ಹಾಗೂ 2008ರಲ್ಲಿ ಎಂ.ಫಿಲ್ ಪದವಿ ಪಡೆದುಕೊಂಡರು. ಪಿ.ಜಿ. ಡಿಪ್ಲೋಮಾ ಬಸವ ಅಧ್ಯಯನ, ಪಿ.ಜಿ. ಡಿಪ್ಲೋಮ ಭಾಷಾ ವಿಜ್ಞಾನ ಅಧ್ಯಯನವನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದರು. 2016ರಲ್ಲಿ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿಯನ್ನು ಪಡೆದುಕೊಂಡರು. 2018 ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನ ಸಹಾಯದಿಂದ ಇವರ ಸಂಶೋಧನಾ ಕೃತಿಯು ಪ್ರಕಟವಾಗಿದೆ. ಇವರ “ವಚನೋಧ್ಯಾನ ಸಾಂಸ್ಕೃತಿಕ ಅಧ್ಯಯನ” ಕೃತಿಗೆ ಕರ್ನಾಟಕ ಲೇಖಕಿಯರ ಸಂಘ 2021 ರಲ್ಲಿ ಜಯಮ್ಮ ಕರಿಯಣ್ಣ ಸಂಶೋಧನಾ ದತ್ತಿ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಸ್ತುತ ಬಿ.ಎಲ್.ಡಿ.ಇ. ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತಮ ವಾಗ್ನಿಗಳು. ಕ್ರಿಯಾಶೀಲ ವ್ಯಕ್ತಿತ್ವದ ಬಹುಮುಖ ಪ್ರತಿಭಾವಂತರು. ವಚನ ಸಾಹಿತ್ಯವನ್ನು ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ. ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ. ಆಕಾಶವಾಣಿಯಲ್ಲಿ ಚಿಂತನಗಳು ಕೂಡ ಪ್ರಸಾರವಾಗಿವೆ.

ವಚನ ಸಾಹಿತ್ಯ, ವಿಮರ್ಶೆ, ಸಂಪಾದನಾ ಮತ್ತು ಸಂಶೋಧನೆ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಮತ್ತು ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದಾರೆ. ಇವರ ಅನೇಕ ಸಂಶೋಧನಾ ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಪ್ರಸ್ತುತ ಇವರು ವಿಜಯಪುರ ಜಿಲ್ಲೆಯ ಕದಳಿ ಜಿಲ್ಲಾ ವೇದಿಕೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರತ ಸದಸ್ಯರಾಗಿ ಸೇವೆ ಮಾಡುತ್ತಿದ್ದಾರೆ. ಮತ್ತು ಶರಣ ತತ್ವ ಚಿಂತನೆಗಳನ್ನ ಮನೆ-ಮನಗಳಿಗೆ ಪಸರಿಸುವಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸಾಹಿತ್ಯಕ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ “ಶ್ರೀ ಗುರು ಪುಟ್ಟರಾಜ ಸದ್ಭಾವನಾ ರಾಜ್ಯ ಮಟ್ಟದ ಪ್ರಶಸ್ತಿ “ಅಕ್ಕನ ಮನೆ ಪ್ರತಿಷ್ಠಾನದ” ಅಕ್ಕ ಪ್ರಶಸ್ತಿ, “ಚೈತನ್ಯಶ್ರೀ” ಪ್ರಶಸ್ತಿಗಳು ಇವರಿಗೆ ಬಂದಿವೆ. ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರದ ಸಾಧನೆಗಾಗಿ ಇವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ 2025ನೇ ಸಾಲಿನ “ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ” ನೀಡಿ ಸನ್ಮಾನಿಸಲು ಅಭಿಮಾನ ಪಡುತ್ತದೆ.

ಇವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ಪರವಾಗಿ ಹೃತೂರ್ವಕ ಅಭಿನಂದನೆಗಳು.

ಆಧುನಿಕ ವಚನ ರಚನೆ

ಶ್ರೀ ಎಂ.ಬಿ. ಸಂತೋಷ್‌

‘ಕಾವ್ಯಾರಾಧನೆಯನ್ನೇ ಬದುಕಿನ ಬಹು ದೊಡ್ಡ ಆಸ್ತಿ’ ಎಂದು ನಂಬಿಕೊಂಡು ಕಳೆದ ಎರಡು ದಶಕಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಂಭೀರವಾಗಿ ಕೃಷಿ ಮಾಡುತ್ತಿರುವ ಮೈಸೂರಿನ ಶ್ರೀ ಎಂ.ಬಿ. ಸಂತೋಷ್ ಅವರು ಕವಿ, ಕಾದಂಬರಿಕಾರರು, ಆಧುನಿಕ ವಚನಕಾರರಾಗಿ ಹಾಗೂ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ (ನೋಂ.)ದ ಸಂಸ್ಥಾಪಕ ಅಧ್ಯಕ್ಷರಾಗಿ ಸಾಹಿತ್ಯ ಸರಸ್ವತಿಯ ಸೇವೆಯನ್ನು ಶ್ರದ್ಧೆಯಿಂದ ಮಾಡುತ್ತಾ ಬಂದಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಾದ ಚುಟುಕು, ಹನಿಗವನ, ಆಧುನಿಕ ವಚನ, ಕವನ, ಮುಕ್ತಕ, ಸಣ್ಣ ಕಥೆ ಹಾಗೂ ಕಾದಂಬರಿಗಳು ಸೇರಿದಂತೆ ಒಟ್ಟು 31 ಕೃತಿಗಳನ್ನು ರಚಿಸಿದ್ದಾರೆ. ‘ವಚನ ಮಂಜರಿ’, ‘ವಚನ ವೈಡೂರ್ಯ’, ‘ವಚನ ದುಂದುಭಿ’, ‘ವಚನ ಸಮೃದ್ಧಿ’, ‘ವಚನ ಮಾಧುರ್ಯ’, ‘ವಚನ ವೈವಿಧ್ಯ’ ಆಧುನಿಕ ವಚನ ಸಂಕಲನಗಳು ಈಗಾಗಲೇ ಲೋಕಾರ್ಪಣೆಗೊಂಡು ಓದುಗರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ. ಶ್ರೀಯುತರ ಅಭಿಮಾನಿಗಳಿಂದ ಅವರ 60 ನೇ ಜನ್ಮದಿನದ ಶುಭ ಸಂದರ್ಭದಲ್ಲಿ’ ಸಂತೋಷ್ – ಸಂಪ್ರೀತಿ ‘ ಅಭಿನಂದನಾ ಗ್ರಂಥ ಲೋಕಾರ್ಪಣೆಗೊಂಡಿದೆ.

ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ(ನೋಂ)ದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿನ 950ಕ್ಕೂ ಹೆಚ್ಚು ಸಾಧಕ ಮಕ್ಕಳನ್ನು ಗುರುತಿಸಿ ವಯೋಮಾನಕ್ಕೆ ಅನುಗುಣವಾಗಿ ‘ಬಾಲಶ್ರೀ’, ‘ಯುವಶ್ರೀ’ ಹಾಗೂ ‘ಸಾಧನಶ್ರೀ’ ಪ್ರಶಸ್ತಿಗಳನ್ನು ನೀಡಿದ್ದಾರೆ. ಅಲ್ಲದೇ, ಸುಮಾರು 400ಕ್ಕೂ ಹೆಚ್ಚು ಹಿರಿಯ ಸಾಧಕರನ್ನೂ ಸಹ ಗೌರವಿಸಿರುವುದು ಹೆಗ್ಗಳಿಕೆ. ಶ್ರೀಯುತರು ತಮ್ಮ ಸಾಹಿತ್ಯ ಸೇವೆಗಾಗಿ ನಾಡಿನ ಹಲವಾರು ಸಂಘ-ಸಂಸ್ಥೆಗಳಿಂದ ‘ಡಾ. ದ.ರಾ.ಬೇಂದ್ರೆ ಕಾವ್ಯ ಪ್ರಶಸ್ತಿ’, ‘ಮೈಸೂರು ರತ್ನ ಪ್ರಶಸ್ತಿ’, ‘ಮಕ್ಕಳ ಮಾಣಿಕ್ಯ ಪ್ರಶಸ್ತಿ’, ‘ಮಕ್ಕಳ ಮೇರು ಪರ್ವತ ಪ್ರಶಸ್ತಿ’, ‘ವಚನ ಕಣ್ಮಣಿ ಪ್ರಶಸ್ತಿ’, ‘ಕರ್ನಾಟಕ ಬಸವ ಜ್ಯೋತಿ ಪ್ರಶಸ್ತಿ’, ‘ಕಾಯಕರತ್ನ ಬಸವಶ್ರೀ ಪ್ರಶಸ್ತಿ’, ‘ಸಿದ್ಧಗಂಗಾ ಸಾಹಿತ್ಯ ಪ್ರಶಸ್ತಿ’ ಮೈಸೂರು ಜಿಲ್ಲಾಡಳಿತದ ವತಿಯಿಂದ ‘ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಗೆ ಭಾಜನರಾಗಿರುವುದು ಹೆಮ್ಮೆಯ ವಿಷಯ.

ಆಧುನಿಕ ವಚನ ರಚನೆಗಾಗಿ ಇವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ 2025ನೇ ಸಾಲಿನ “ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ ಪುರಸ್ಕಾರ” ನೀಡಿ ಸನ್ಮಾನಿಸಲು ಅಭಿಮಾನ ಪಡುತ್ತದೆ.

ಇವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ಪರವಾಗಿ ಹೃತೂರ್ವಕ ಅಭಿನಂದನೆಗಳು.

ವಚನ ಸಂಗೀತ ಕ್ಷೇತ್ರ

ಶ್ರೀ ರಾಜು ಎಮ್ಮಿಗನೂರು

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಬಸವರಾಜ ಹುಲಿಗೆಮ್ಮ ದಂಪತಿಗಳ ಮಗನಾಗಿ ಜನಿಸಿದ ಪ್ರತಿಭಾಶಾಲಿ ಕಲಾವಿದರಾದ ರಾಜು ಎಮ್ಮಿಗನೂರು ಅವರು ಪಂಡಿತ್ ಪುಟ್ಟರಾಜ ಗವಾಯಿ ಅವರ ಶಿಷ್ಯರಾಗಿದ್ದರು. ಬಾಲ್ಯದಲ್ಲಿಯೇ ಸಂಗೀತದ ಆಸಕ್ತಿ ಬೆಳೆಸಿಕೊಂಡ ಇವರು ಗದುಗಿನ ವಿರೇಶ್ವರ ಪುಣ್ಯಾಶ್ರಮದಲ್ಲಿ 12 ವರ್ಷಗಳ ಕಾಲ ಪಂಡಿತ್ ಪುಟ್ಟರಾಜ ಗವಾಯಿ ಅವರ ಶಿಷ್ಯರಾಗಿ ಹಿಂದುಸ್ತಾನಿ ಸಂಗೀತದಲ್ಲಿ ನಿಪುಣತೆ ಪಡೆದರು. ನಂತರ ಧಾರವಾಡದಲ್ಲಿ ಎಂ ಮ್ಯೂಸಿಕ್ ಮಾಡುವ ಸಂದರ್ಭದಲ್ಲಿ ಪಂಡಿತ್ ಶ್ರೀಪಾದ ಹೆಗಡೆ ಅವರ ಬಳಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿರುತ್ತಾರೆ.

ರಾಜು ಎಮ್ಮಿಗನೂರು ಅವರು ಪ್ರಸಿದ್ದ ಸಂಗೀತ ನಿರ್ದೇಶಕ, ಗಾಯಕ, ಉಪನ್ಯಾಸಕ ಮತ್ತು ಲೇಖಕರಾಗಿದ್ದಾರೆ. ಪ್ರಸ್ತುತ ಅವರು ಹಂಸಲೇಖ ದೇಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, ಜೀ ಕನ್ನಡ ಸರಿಗಮಪ ಗ್ಯಾಂಡ್ ಜ್ಯೂರಿ ಸದಸ್ಯರು ಹಾಗೂ ಪ್ರಸ್ತುತ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅವರ ಸಂಗೀತ ನಿರ್ದೇಶನದಲ್ಲಿ ಪುನೀತ್ ರಾಜಕುಮಾರ್, ರಘು ದೀಕ್ಷಿತ್, ಕೈಲಾಶ್‌ ಖೇರ್, ಸಂಗೀತಾ ಕಟ್ಟಿ, ಎಂ.ಡಿ. ಪಲ್ಲವಿ, ಅನುರಾಧ ಭಟ್ ಮೊದಲಾದ ಖ್ಯಾತ ಗಾಯಕರು ಹಾಡಿದ್ದಾರೆ. ಇದುವರೆಗೆ ಭಾವಗೀತೆ, ಚಲನಚಿತ್ರಗೀತೆ, ವಚನಗಳು ಸೇರಿದಂತೆ 350ಹೆಚ್ಚು ಗೀತೆಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಅಹಮದಾಬಾದ್, ಬೆಂಗಳೂರು, ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ, ಆನೆಗೊಂದಿ ಉತ್ಸವ, ಕಿತ್ತೂರು ಉತ್ಸವ ಸೇರಿದಂತೆ ನಾಡಿನ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಡಿರುತ್ತಾರೆ. ರಾಜು ಎಮ್ಮಿಗನೂರು ಅವರು ಕೀಮಾ ಇಂಟರ್‌ನ್ಯಾಷನಲ್ ಅವಾರ್ಡ್, ಗದುಗಿನ ವೀರೇಶ್ವರ ಪುಣ್ಯಾಶ್ರಮ ಕೊಡುವ ಕುಮಾರಶ್ರೀ ಪ್ರಶಸ್ತಿ, ಸಂಗೀತ ರತ್ನ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಹಾಗೂ ರಾಜ್ಯಮಟ್ಟದ ಪುರಸ್ಕಾರಗಳನ್ನು ಪಡೆದಿದ್ದಾರೆ. ವಚನ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಗಾಗಿ ಇವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ 2025ನೇ ಸಾಲಿನ “ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ ಪುರಸ್ಕಾರ” ನೀಡಿ ಸನ್ಮಾನಿಸಲು ಅಭಿಮಾನ ಪಡುತ್ತದೆ.

ಇವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ಪರವಾಗಿ ಹೃತೂರ್ವಕ ಅಭಿನಂದನೆಗಳು.

ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ

ಸಗರನಾಡು ಪ್ರಕಾಶನ ಸುರಪುರ, ಸಂಸ್ಥೆ ಅಧ್ಯಕ್ಷರು, ಶ್ರೀ ಪ್ರಕಾಶ ಎಸ್. ಅಂಗಡಿ ಕನ್ನೆಳ್ಳಿ

ಸಗರನಾಡು ಪ್ರಕಾಶನ ಸುರಪುರ ಸಂಸ್ಥೆಯು ಪುಸ್ತಕಗಳ ಪ್ರಕಟಣೆಯ ಜೊತೆಗೆ ಶರಣ ಸಂಸ್ಕೃತಿ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸಗರನಾಡು ಪ್ರಕಾಶನ ಸುರಪುರ ಸಂಸ್ಥೆಯು ಈಗಾಗಲೇ 40ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಅದರಲ್ಲಿ 15ಕ್ಕೂ ಹೆಚ್ಚು ಪುಸ್ತಕಗಳು ಬಸವಾದಿ ಶರಣರ ಜೀವನ ಸಾಧನೆ ಹಾಗೂ ವಚನ ಸಾಹಿತ್ಯದ ಕುರಿತಾಗಿರುವುದು ಮತ್ತಷ್ಟು ವಿಶೇಷವಾಗಿದೆ.

ಅಧ್ಯಕ್ಷರಾದ ಪ್ರಕಾಶ ಅಂಗಡಿ ಕನ್ನೆಳ್ಳಿಯವರು ಈ ಸಂಸ್ಥೆಯ ಕ್ರಿಯಾಶೀಲ ಚಿಂತಕರಾಗಿದ್ದು, ಸಗರನಾಡು ಸೇವಾ ಪ್ರತಿಷ್ಠಾನ ಎಂಬ ಬೃಹತ್ ಸಂಸ್ಥೆಯನ್ನು ಕಟ್ಟಿ ನೂರಾರು ಸಮಾರಂಭಗಳನ್ನು ಆಯೋಜಿಸಿದ್ದಾರೆ. ಜೊತೆಗೆ ಹತ್ತಾರು ಐತಿಹಾಸಿಕ ಸಮ್ಮೇಳನ ಸಮಾವೇಶ, ಉತ್ಸವಗಳನ್ನು ಆಯೋಜಿಸಿದ್ದಾರೆ. ಪ್ರಸ್ತುತ ಇವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಯುವಪ್ರತಿನಿಧಿಯಾಗಿ ಶರಣ ಸಾಹಿತ್ಯ ಪ್ರಸಾರ ಕಾರ್ಯದಲ್ಲಿ ತಮ್ಮನ್ನು ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ. ಶರಣ ಸಾಹಿತ್ಯ ಪ್ರಸಾರದಲ್ಲಿ ತೊಡಗಿಕೊಂಡು, ವಚನ ಬಿತ್ತನೆ, ವಚನ ಉಳುಮೆ, ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಸೇರಿದಂತೆ ಹತ್ತಾರು ಬಗೆಯ ಶರಣ ಸಾಹಿತ್ಯದ ಪರವಾಗಿ ಕಾಯಕ ನಿರ್ವಹಿಸುತ್ತಿದ್ದಾರೆ. ಇವರ ಸೇವೆಗಾಗಿ ಈಗಾಗಲೇ ಸರಕಾರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮಹತ್ತರವಾದ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ಶರಣ ಸಂಸ್ಕೃತಿ ಪ್ರಸಾರ ಕ್ಷೇತ್ರದ ಸಾಧನೆಗಾಗಿ “ಸಗರನಾಡು ಪ್ರಕಾಶನ ಸುರಪುರ ಸಂಸ್ಥೆಗೆ” ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ 2025ನೇ ಸಾಲಿನ “ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ ಪುರಸ್ಕಾರ” ನೀಡಿ ಸನ್ಮಾನಿಸಲು ಅಭಿಮಾನ ಪಡುತ್ತದೆ.

ಈ ಸಂಸ್ಥೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ಪರವಾಗಿ ಹೃತೂರ್ವಕ ಅಭಿನಂದನೆಗಳು.

ರಮಣಶ್ರೀ ಶರಣ ಪ್ರಶಸ್ತಿಗಳು

ಗ್ಯಾಲರಿ

ಪ್ರಶಸ್ತಿ ಸಮಾರಂಭದಿಂದ ಸೆರೆಹಿಡಿದ ಕ್ಷಣಗಳನ್ನು ಚಿತ್ರಗಳ ಮೂಲಕ ವೀಕ್ಷಿಸಿ.