ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ

2014

ರಮಣಶ್ರೀ ಶರಣ ಪ್ರಶಸ್ತಿಗಳು

ಹಿರಿಯ ಶ್ರೇಣಿ

ಶರಣ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಲೇಖಕರನ್ನು ಸನ್ಮಾನಿಸಲಾಯಿತು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರ

ಪ್ರೊ. ಎನ್.ಜಿ. ಮಹದೇವಪ್ಪ

ಪ್ರೊ, ಎನ್.ಜಿ. ಮಹದೇವಪ್ಪ ಅವರ ಜನನ ೧೯೩೭ ರಲ್ಲಿ, ಜನ್ಮಸ್ಥಳ ಚಿಕ್ಕಮಗಳೂರು ಜಿಲ್ಲೆಯ ನಿಡಘಟ್ಟ, ತಂದೆ ಶ್ರೀ ಜಿ. ರುದಪ್ಪ, ಪ್ರಾಥಮಿಕ ಶಾಲಾ ಉಪಾಧ್ಯಾಯರು. ಹುಟ್ಟೂರಿನಲ್ಲಿ ನಡೆದ ಪ್ರಾಥಮಿಕ ಶಿಕ್ಷಣದಲ್ಲಿ ಇವರ ಗುರು ಶ್ರೀ ಗೊ.ರು.ಚ. ಅವರು. ಮೈಸೂರು ಮಹಾರಾಜ ಕಾಲೇಜಿನಿಂದ ಸ್ವರ್ಣಪದಕದೊಂದಿಗೆ ತತ್ತ್ವಶಾಸ್ತ್ರದಲ್ಲಿ ಬಿ.ಎ. ಮತ್ತು ಪ್ರಥಮ ದರ್ಜೆಯಲ್ಲಿ ಎಂ.ಎ. ಪದವಿ. ‘ದಿ ಕಾನ್ಸೆಪ್ಟ್ ಆಫ್ ಶಕ್ತಿ ಇನ್ ವೀರಶೈವಿಸಂ’ ಅವರ ಪಿಎಚ್.ಡಿ., ಮಹಾ ಪ್ರಬಂಧ, ಮಹಾರಾಜಾ ಕಾಲೇಜು, ಮೈಸೂರು, ಜಿ.ಎಚ್. ಕಾಲೇಜು ಹಾವೇರಿಯಲ್ಲಿ ಉಪನ್ಯಾಸಕರಾಗಿ ಸೇವೆ, ಮುಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ರೀಡರ್ ಆಗಿ ಪ್ರಾಧ್ಯಾಪಕರಾಗಿ, ತತ್ತ್ವಶಾಸ್ತ್ರವಿಭಾಗದ ಮುಖ್ಯಸ್ಥರಾಗಿ ಸೇವೆ. ೧೯೯೭ರಲ್ಲಿ ನಿವೃತ್ತಿ. ಐವರು ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಯಶಸ್ವಿ ಮಾರ್ಗದರ್ಶನ.

ತತ್ವಶಾಸ್ತ್ರ ಮತ್ತು ವಚನ ಸಾಹಿತ್ಯವನ್ನು ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ತರ್ಕಶಾಸ್ತ್ರ(ನಿಗಮನ), ವಚನಗಳಲ್ಲಿ ಪ್ರಸಾದದ ಪರಿಕಲ್ಪನೆ, ಧಾರ್ಮಿಕ ನಂಬಿಕೆಗಳು ಮತ್ತು ದಾರ್ಶನಿಕ ವಿಶ್ಲೇಷಣೆ, ವಚನ ಪರಿಭಾಷಾಕೋಶ, ವಚನಗಳಲ್ಲಿ ತತ್ವ ಮೀಮಾಂಸೆ, ಲಿಂಗಾಯತರು ಹಿಂದೂಗಳಲ್ಲ, ಯೋಗ ಮತ್ತು ಭಾರತೀಯ ತತ್ವಶಾಸ್ತ್ರ, ಉರಿಲಿಂಗಪೆದ್ದಿಯ ಆಯ್ದ ವಚನಗಳ ವ್ಯಾಖ್ಯಾನ, ಡಿಕ್ಷನರಿ ಆಫ್ ಟೆಕ್ನಿಕಲ್ ಟರ್ಮ್ಸ್ ಇನ್ ಫಿಲಾಸಫಿ, ಬಸವಣ್ಣ ಮತ್ತು ಮಾರ್ಟಿನ್ ಲೂಥರ್, ಮೆಟಾಫಿಸಿಕ್ಸ್ ಆಫ್ ಲಿಂಗಾಯತಿಸಂ ಮೊದಲಾದ ಪುಸ್ತಕಗಳ ರಚನೆ, ಸುಮಾರು ೭೦ ಕ್ಕೂ ಹೆಚ್ಚು ಲೇಖನಗಳ ಪ್ರಕಟಣೆ. ಪ್ರಸ್ತುತ ‘ಲಿಂಗಾಯತ ದರ್ಶನ’ ಮಾಸಿಕದ
ಸಂಪಾದಕರು.

ವಚನ ಸಾಹಿತ್ಯ ಮತ್ತು ತತ್ತ್ವಶಾಸ್ತ್ರದಲ್ಲಿ ಡಾ.ಎನ್.ಜಿ. ಮಹದೇವಪ್ಪ ಅವರು ಮಾಡಿರುವ ಗಮನಾರ್ಹ ಕಾರ್ಯಕ್ಕೆ ಮನ್ನಣೆಯಾಗಿ ಅವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಮಣಶ್ರೀ ಪ್ರತಿಷ್ಠಾನದ ಸಹಯೋಗದೊಂದಿಗೆ ೨೦೧೪ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನಪಡುತ್ತದೆ.

ಆಧುನಿಕ ವಚನ ರಚನೆ

ಪ್ರೋ ಎಚ್.ಎ. ಭಿಕ್ಷಾವರ್ತಿಮಠ

ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಅವರ ಜನ್ಮಸ್ಥಳ ಹಾವೇರಿ ಜಿಲ್ಲೆ, ರಾಣಿಬೆನ್ನೂರು ತಾಲ್ಲೂಕು, ಹನುಮಾಪುರ, ೧೯೫೧ರ ಜೂನ್ ೧ ರಂದು ಜನನ. ತಂದೆ ಅಡಿವೆಯ್ಯಸ್ವಾಮಿ, ತಾಯಿ ಶ್ರೀಮತಿ ದೇವೀರಮ್ಮ, ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಎಂ.ಎ. ಪದವಿ, ಹರಿಹರದ ಎಸ್.ಜಿ.ಪಿ.ಪಿ. ಸ್ವಾಯತ್ತ ಮಹಾವಿದ್ಯಾಲಯದಲ್ಲಿ ೩೫ ವರ್ಷ ಇಂಗ್ಲಿಷ್ ಅಧ್ಯಾಪಕರಾಗಿ ಮತ್ತು ೫ ವರ್ಷ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಕನ್ನಡ ಸಾಹಿತ್ಯದಲ್ಲಿ, ಅದರಲ್ಲೂ ಆಧುನಿಕ ವಚನ ರಚನೆಯಲ್ಲಿ ಭಿಕ್ಷಾವರ್ತಿಮಠ ಅವರಿಗೆ ಅಪಾರ ಆಸಕ್ತಿ, ಕನ್ನಡ ಶಾಯರಿ ಲೋಕ, ನಾ ಹೀಗಿರುವ ಬಸವಾ, ಮಿಂಚುಗೊಂಚಲು, ಹೂಬಾಣ, ವಚನ ಸಿಂಚನ, ನನ್ನ ಕವಿತೆಯೇ ಹೀಗೆ ಇವು ಭಿಕ್ಷಾವರ್ತಿ ಮಠ ಅವರ ಸಾಹಿತ್ಯ ಕೃತಿಗಳು.

ಬೀದರ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಸಾಹಿತ್ಯ ಸಮ್ಮೇಳನ, ಬೀಚಿ ಶತಮಾನೋತ್ಸವ, ದಾವಣಗೆರೆ ಜಿಲ್ಲಾ ಸಾಹಿತ್ಯ ಸಮ್ಮೇಳನ ಮೊದಲಾದ ಸಂದರ್ಭಗಳ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದ ಪದವಿ ತರಗತಿಗಳ ಇಂಗ್ಲಿಷ್ ಸಾಹಿತ್ಯ ಪಠ್ಯಪುಸ್ತಕಗಳ ಸಂಪಾದಕರಾಗಿ ಸೇವೆ. ಸಮುದಾಯ ಸಂಘಟನೆಯ ಅಧ್ಯಕ್ಷರಾಗಿ ಮತ್ತು ಜನಜಾಗೃತಿಯ ನಾಟಕಗಳಲ್ಲಿ ಪಾತ್ರನಿರ್ವಹಣೆ.

ಆಕಾಶವಾಣಿಯ ಚಿಂತನ ಕಾರ್ಯಕ್ರಮದಲ್ಲಿ ವಿಚಾರ ರತ್ನಗಳ ಪ್ರಸಾರ, ಸಂಕ್ರಮಣ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ನಾಗರೀಕ ಸನ್ಮಾನ ಮೊದಲಾದ ಗೌರವ ಪುರಸ್ಕಾರ. ಆಧುನಿಕ ವಚನ ರಚನೆಯ ಅವರ ಗಮನಾರ್ಹ ಸೇವೆಗೆ ಮನ್ನಣೆಯಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಮಣಶ್ರೀ ಪ್ರತಿಷ್ಠಾನದ ಸಹಯೋಗದೊಂದಿಗೆ ೨೦೧೪ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ವಚನ ಸಂಗೀತ ಕ್ಷೇತ್ರ

ಶ್ರೀಮತಿ ಕಸ್ತೂರಿ ಶಂಕರ್

ಶ್ರೀಮತಿ ಕಸ್ತೂರಿ ಶಂಕರ್ ಸಂಗೀತ ಕ್ಷೇತ್ರದ ಜನರ ಹೆಸರು. ತಂದೆ ಮೈಸೂರಿನ ಸ್ವಾತಂತ್ರ ಹೋರಾಟದರ ಶ್ರೀ ಜೆ.ಸಿ. ಶಂಕರಪ್ಪ; ತಾಯಿ ಗಿರಿಜಮ್ಮ ಬಾಲ್ಯದಿಂದಲೇ ಅಪರೂಪದ ಸಂಗೀತ ಪ್ರತಿಭೆ, ೧೯೭೨ ರಿಂದ ಸಾರ್ವಜನಿಕ ವೇದಿಕೆಗಳಲ್ಲಿ ಗಾಯನ. ೧೯೭೧ರಲ್ಲಿ ಪ್ರಸಿದ ಹಾರ್ಮೋನಿಯಂ ವಾದಕರಾದ ಅರುಣಾಚಲಪ್ಪನವರ ಪುತ್ರ ಹಾಗೂ ಭಾರತದ ಸುಪ್ರಸಿದ್ಧ ನ್ಯೂ ಅರುಣಾ ಮ್ಯೂಸಿಕಲ್ಸ್ ಸಂಸ್ಥೆಯ ಮಾಲೀಕರಾದ ಶ್ರೀ ಎ. ಶಂಕರ್ ಅವರ ಬಾಳ ಸಂಗಾತಿ.

ವಿದ್ವಾನ್ ಎ. ಸುಬ್ಬರಾವ್ ಹಾಗೂ ಡಿ.ಬಿ. ಹರೀಶ್‌ ಅವರಲ್ಲಿ ಶಾಸ್ತ್ರೀಯ ಸಂಗೀತ ಶಿಕ್ಷಣ, ಕಣಗಲ್ ಪ್ರಭಾಕರ ಶಾಸ್ತ್ರಿಗಳ ಉತ್ತೇಜನದೊಂದಿಗೆ ಕನ್ನಡ, ಮಲಯಾಳ, ತುಳು ಭಾಷೆ ಸೇರಿದಂತೆ ೬೦ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಹಿನ್ನೆಲೆ ಗಾಯನ, ಜೇಸುದಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಪಿ.ಬಿ. ಶ್ರೀನಿವಾಸ್ ಮೊದಲಾದ ಹಿರಿಯ ಗಾಯಕರೊಂದಿಗೆ ಹಾಡಿರುವ ಯಶಸ್ಸು.

ಭಕ್ತಿಗೀತೆ, ಭಾವಗೀತೆ, ಜನಪದ ಗೀತೆಗಳನ್ನು ಧ್ವನಿಸುರಳಿಗಳಿಗಾಗಿ ವಿವಿಧ ಭಾಷೆಗಳಲ್ಲಿ ಹಾಡಿದ್ದಾರೆ. ಆಕಾಶವಾಣಿ – ಚಂದನ ಟಿ.ವಿ.ಯ ‘ಎ’ ಉನ್ನತ ದರ್ಜೆ
ಕಲಾವಿದೆ.

ಶರಣ ವಚನಗಳಿಗೆ, ಭಾವಗೀತೆಗಳಿಗೆ ರಾಗಸಂಯೋಜಿಸಿ ಹಾಡಿರುವ ಇವರ ಧ್ವನಿಸುರಳಿಗಳು ಜನಪ್ರಿಯವಾಗಿವೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವ ಹೆಗ್ಗಳಿಕೆ ಕಸ್ತೂರಿ ಶಂಕರ್
ಅವರದು.

ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಕದಳಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ವಚನ ಸಾಹಿತ್ಯಶ್ರೀ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳಲ್ಲದೆ, ನಾದಮಯ ಕಸ್ತೂರಿ, ಗಾನಕಲಾ ಕೌಸ್ತುಭ, ಗಾನಶಾರದೆ, ಕನ್ನಡದ ಕೋಗಿಲೆ ಮೊದಲಾದ ಬಿರುದುಗಳ ಪುರಸ್ಕಾರ.

ಸಂಗೀತ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದಿರುವ ಕಲಾತಪಸ್ವಿ ಶ್ರೀಮತಿ ಕಸ್ತೂರಿ ಶಂಕರ್ ಅವರ ಕಲಾಸೇವೆಗೆ ಮನ್ನಣೆಯಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಮಣಶ್ರೀ ಪ್ರತಿಷ್ಠಾನದ ಸಹಯೋಗದೊಂದಿಗೆ ೨೦೧೪ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನ ಪಡುತ್ತದೆ.

ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ

ಅಲ್ಲಮಪ್ರಭು ಪೀಠ

“ಅಪರಿಮಿತ ಕತ್ತಲೊಳಗೆ ವಿಪರೀತ ಬೆಳಕನಿಕ್ಕಿ ದೊಡೆ’ ಘೋಷ ವಾಕ್ಯದೊಡನೆ ಸ್ಥಾಪಿತ ಗೊಂಡಿರುವ ಸಂಸ್ಥೆ ಕಾಂತಾವರದ ‘ಅಲ್ಲಮಪ್ರಭು ಪೀಠ’

೧೨ನೆಯ ಶತಮಾನದ ಶರಣ ಸಮುದಾಯಕ್ಕೆ ಗುರುವೆನಿಸಿದ ಶೂನ್ಯ ಸಿಂಹಾಸನಾಧೀಶ್ವರ ಅಲ್ಲಮಪ್ರಭು ಜಗತ್ತು ಕಂಡ ಅಪರೂಪದ ದಾರ್ಶನಿಕ, ಅಲ್ಲಮನ ಚಿಂತನೆಗಳಿಗೆ ಸ್ವಸ್ವರೂಪ ಕೊಡಲು ರೂಪಕವಾಗಿ ೨೦೧೦ ರಲ್ಲಿ ಹುಟ್ಟಿಕೊಂಡ ಈ ಪೀಠದ ಉದ್ದೇಶ ಭೌತಿಕ ಮತ್ತು ಭೌದ್ಧಿಕವಾದ ಎಲ್ಲಾ ವಾದಗಳಿಗೆ ಆಧ್ಯಾತ್ಮದ ಜೊತೆ ಸಂವಾದ ಸಾಧ್ಯವೇ ಎನ್ನುವ ಪ್ರಯೋಗ.

ದಕ್ಷಿಣ ಕನ್ನಡ ಜಿಲ್ಲೆಯ ನಿಸರ್ಗ ಸುಂದರ ಪರಿಸರದಲ್ಲಿರುವ ಕಾಂತಾವರ ಎಂಬ ಪುಟ್ಟಹಳ್ಳಿಯಲ್ಲಿ ರೂಪುಗೊಂಡಿರುವ ಅಲ್ಲಮಪೀಠ ಅನೇಕ ಯೋಜನೆಗಳನ್ನು, ಯೋಚನೆಗಳನ್ನು ಹೊಂದಿ, ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಅನುವಾಗುತ್ತಿದೆ ೧೮ ಲಕ್ಷ ರೂಪಾಯಿ ವೆಚ್ಚದಲ್ಲಿ ‘ಚಾಟರ ಚೌಕಿ’ ಎಂಬ ಬಯಲು ರಂಗ ಮಂದಿರ ನಿರ್ಮಾಣ ಗೊಂಡಿದೆ. ೧.೫೦ ಕೋಟಿ ರೂ. ವೆಚ್ಚದಲ್ಲಿ ‘ಮಹಾಮನೆ’ ಎಂಬ ಆಡಳಿತ ಮತ್ತು ಸಂಶೋಧನಾ ಕೇಂದ್ರ ನಿರ್ಮಾಣ ಹಂತದಲ್ಲಿದೆ. ಅನುಭವದ ನಡೆ – ಅನುಭಾವದ ನುಡಿ’ ಎಂಬ ಸಂಸ್ಕೃತಿ ಸಂವರ್ಧನದ ಚಿಂತನೆಯ ಉಪನ್ಯಾಸ ಕಾರ್ಯಕ್ರಮ ಪ್ರತಿತಿಂಗಳ ಕೊನೆಯ ಭಾನುವಾರ ನಡೆಯುತ್ತದೆ. ಪೀಠವು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸಗಳನ್ನು ನಡೆಸಿದೆ. ಪೀಠದ ವತಿಯಿಂದ ಉಪನ್ಯಾಸಗಳನ್ನು ವರ್ಷಕ್ಕೊಮ್ಮೆ ಪ್ರಕಟಿಸುವ ಯೋಜನೆ ಹೊಂದಿ ಮೊದಲನೆಯದಾಗಿ ‘ಕರಣ ಕಾರಣ-೧’ ಹೊರಬಂದಿದೆ.

ಅಲ್ಲಮಪ್ರಭುಗಳ ತತ್ವಾದರ್ಶಗಳನ್ನು ಬಿತ್ತರಿಸುವ ಅದಮ್ಯ ಆಸಕ್ತಿ, ಉತ್ಸಾಹಗಳೊಂದಿಗೆ ಸ್ಥಾಪಿತಗೊಂಡಿರುವ ಅಲ್ಲಮಪ್ರಭು ಪೀಠಕ್ಕೆ ಯಶಸ್ಸನ್ನು ಹಾರೈಸುತ್ತಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಮಣಶ್ರೀ ಪ್ರತಿಷ್ಠಾನದ ಸಹಯೋಗದೊಂದಿಗೆ ೨೦೧೪ರ ‘ರಮಣಶ್ರೀ ಶರಣ’ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನಪಡುತ್ತದೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಉತ್ತೇಜನ ಪ್ರಶಸ್ತಿ

ಶರಣ  ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮಾರ್ಗವನ್ನು ತೋರಿದ ಮತ್ತು ಇತರರಿಗೆ ಪ್ರೇರೇಪಿಸುವ ವ್ಯಕ್ತಿಗಳನ್ನು ಗೌರವಿಸಲಾಯಿತು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರ

ಡಾ. ಎಸ್.ಎಸ್, ಅಂಗಡಿ

ಭಾಷಾ ಶಾಸ್ತ್ರ ವ್ಯಾಕರಣ, ಛಂದಸ್ಸು, ಸಾಹಿತ್ಯ ಚರಿತ್ರೆ, ಹಸ್ತಪ್ರತಿ, ಗ್ರಂಥ ಸಂಪಾದನೆ, ಪ್ರಾಚೀನ ಸಾಹಿತ್ಯ ಈ ಎಲ್ಲಾ ಪ್ರಕಾರಗಳಲ್ಲಿ ಅಪಾರವಾದ ಅಧ್ಯಯನ ಮಾಡಿ, ಸದಾ ಸಂಶೋಧನಾ ನಿರತರಾಗಿರುವರು ಡಾ.ಎಸ್.ಎಸ್. ಅಂಗಡಿ ಅವರು.

ಜನ್ಮಸ್ಥಳ ಬೆಳಗಾವಿ ಜಿಲ್ಲೆಯ ಯರಝರವಿ, ಜನ್ಮ ದಿನಾಂಕ ೧೯೬೬ ಜೂನ್, ೧೦, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಅಧ್ಯಯನ. ಸಂಶೋಧನೆ, ಪಾಂಡಿತ್ಯಗಳು ಮುಪ್ಪರಿಗೊಂಡ ಘನವ್ಯಕ್ತಿತ್ವ. ೮೦ಕ್ಕೂ ಹೆಚ್ಚು ಕೃತಿಗಳ ರಚನೆ. ‘ಕನ್ನಡ ಪ್ರಭ’ ದಿನಪತ್ರಿಕೆಯಲ್ಲಿ ‘ನುಡಿ – ಕನ್ನಡಿ’ ಎಂಬ ಅಂಕಣದಲ್ಲಿ ಭಾಷೆಯ ಆಡುರೂಪಗಳ ಸ್ವರೂಪವನ್ನು ಕುರಿತು ಮೂರು ವರ್ಷಗಳು ವಿಚಾರ ವಿನಿಮಯ. ನಾಡಿನ ಹಲವಾರು ಸಂಶೋಧನಾ ಪತ್ರಿಕೆಗಳಲ್ಲಿ ನೂರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಪ್ರಕಟಣೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶರಣ ಸಾಹಿತ್ಯಕ್ಕೆ ಡಾ. ಅಂಗಡಿ ಅವರ ಕೊಡುಗೆ ಮೌಲಿಕವಾದದ್ದು, ವಚನ ಸಾಹಿತ್ಯವನ್ನು ಭಾಷೆ ಮತ್ತು ಛಂದಸ್ಸಿನ ನೆಲೆಯಲ್ಲಿ ಆಳವಾಗಿ ಮತ್ತು ವ್ಯಾಪಕವಾಗಿ ಅಭ್ಯಸಿಸಿದವರಲ್ಲಿ ಡಾ. ಎಸ್.ಎಸ್. ಅಂಗಡಿ ಅವರೇ ಮೊದಲಿಗರು. ‘ವಚನ ಸಾಹಿತ್ಯ ಛಂದೋಲಯ’, ‘ವಚನ ಸಾಹಿತ್ಯ ಭಾಷೆ’, ‘ವಚನ ಸಾಹಿತ್ಯಕ್ಕೆ ಎಂ.
ಚಿದಾನಂದಮೂರ್ತಿಗಳ ಕೊಡುಗೆ’ ಇಂತಹ ಮೌಲಿಕ ಬರಹಗಳು ಅವರಿಂದ ಮೂಡಿ ಬಂದಿವೆ. ಆ ಕೃತಿಗಳಲ್ಲಿ ಶರಣರ ರಚನೆಗಳ ಭಾಷೆಯ ಸಾಮಾಜಿಕ ಆಯಾಮವನ್ನು ಕುರಿತು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಇದರಿಂದ ವಚನ ಸಾಹಿತ್ಯದ ಅಧ್ಯಯನದ ಪರಿಕಲ್ಪನೆ ವಿಸ್ತಾರವಾಗಿದೆ. ತನ್ಮೂಲಕ ಹೊಸ ಓದಿನ ಕ್ರಮಗಳು ರೂಪುಗೊಂಡಿವೆ.

ಡಾ. ಅಂಗಡಿ ಅವರ ಸಾಹಿತ್ಯ ಸೇವೆಗೆ ಸಂದ ಪ್ರಶಸ್ತಿಗಳು ಅನೇಕ ಮೂಜಗಂ ಪ್ರಶಸ್ತಿ, ಲಿಂಗರಾಜ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ಸ್ನೇಹಸೇತು ಪ್ರಶಸ್ತಿ, ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ ಮೊದಲಾದವು ಇವರಿಗೆ ದೊರೆತ ಹಲವು ಪುರಸ್ಕಾರಗಳು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಡಾ. ಅಂಗಡಿ ಅವರು ಸಲ್ಲಿಸಿರುವ ಗಮನಾರ್ಹ ಸೇವೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಮಣಶ್ರೀ ಪ್ರತಿಷ್ಠಾನದ ಸಹಯೋಗದೊಂದಿಗೆ ೨೦೧೪ರ ‘ರಮಣಶ್ರೀ ಶರಣ’ ಉತ್ತೇಜನ ಪ್ರಶಸ್ತಿ ನೀಡಿ ಗೌರವಿಸಲು ಹರ್ಷಿಸುತ್ತದೆ.

ಆಧುನಿಕ ವಚನ ರಚನೆ

ಪ್ರಶಾಂತ ರಿಪ್ಪನ್‌ಪೇಟೆ

ಮರುಗದೆಲೆ ಹುಟ್ಟುತ್ತಲೇ ಜಗತ್ತಿಗೆ ಪರಿಮಳ ಬೀರುವಂತೆ ಬಾಲ್ಯದಿಂದಲೇ ತಮ್ಮ ಪ್ರತಿಭೆಯನ್ನು ತೋರಿಸುತ್ತಾ ಬಂದವರು ಪ್ರಶಾಂತ ರಿಪ್ಪನ್‌ಪೇಟೆ, ತಾಯಿ ಶ್ರೀಮತಿ ಯಶೋದಮ್ಮ, ತಂದೆ ಶ್ರೀ ಬಿ. ಶೇಖರಪ್ಪ, ಜನನ ೧೯೮೧, ಜುಲೈ, ೧೫ ರಂದು. ಜನ್ಮಸ್ಥಳ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್ ಪೇಟೆ. ವಿದ್ಯಾರ್ಥಿದೆಸೆಯಿಂದಲೇ ಗಾಯನ, ಭಾಷಣ, ನಾಟಕ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೊಮೊ ಪದವಿ. ವೃತ್ತಿಯಲ್ಲಿ ಪತ್ರಕರ್ತರು.

‘ಮನೆಯೇ ಮೊದಲ ಪಾಠಶಾಲೆ, ತಾಯಿ ಮೊದಲ ಗುರು’ ಎಂಬ ನಾಣ್ಣುಡಿಯಂತೆ ತಾಯಿ ಯಶೋದಮ್ಮ ಸಾಹಿತ್ಯ ಕೃಷಿಗೆ ಪೋಷಣೆ ನೀಡಿದವರು. ಪ್ರಶಾಂತ್ ಅವರ ‘ವಚನ ಕುಸುಮ’, ‘ವಚನಮಾಲೆ’ ಎಂಬ ಎರಡು ಆಧುನಿಕ ವಚನ ಸಂಗ್ರಹಗಳನ್ನು ಕವಲೇದುರ್ಗದ ಡಾ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಮರುಳಸಿದ್ಧೇಶ್ವರ ವೀರಶೈವ ಅಧ್ಯಯನ ಕೇಂದ್ರದಿಂದ ಪ್ರಕಟಿಸಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ೭೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಧಾರವಾಡದಲ್ಲಿ ನಡೆದ ೧೧ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ವಚನ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾರೆ. ಶರಣ ಸಾಹಿತ್ಯ, ಶರಣ ಪರಂಪರೆ, ವೀರಶೈವ ಸಾಹಿತ್ಯ, ಸಂಸ್ಕೃತಿ ಕುರಿತು ಹಲವಾರು ಉಪನ್ಯಾಸಗಳನ್ನು ನೀಡಿದ್ದಾರೆ. ಪ್ರಸ್ತುತ ಟಿ.ವಿ. ೯ ರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಶಾಂತ್ ಅವರ ‘ಹಳ್ಳಿಕಟ್ಟೆ’ ವಿಶೇಷ ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿದ್ದಾರೆ. ಪ್ರಶಾಂತ್ ಅವರಿಗೆ ಕರ್ನಾಟಕ ಜಾಗೃತದಳದ ಗೌರವ, ‘ಮೌಲ್ಯ ಪತ್ರಿಕೋದ್ಯಮರತ್ನ’ ಪ್ರಶಸ್ತಿ, ಕರ್ನಾಟಕ ದಸರಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳ ಪುರಸ್ಕಾರ.

ಆಧುನಿಕ ವಚನ ರಚನೆಯಲ್ಲಿ ತಮ್ಮದೇ ಆದ ಪ್ರತಿಭೆಯನ್ನು ತೋರಿರುವ ಪ್ರಶಾಂತ್ ರಿಪ್ಪನ್‌ ಪೇಟೆ ಅವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಮಣಶ್ರೀ ಪ್ರತಿಷ್ಠಾನದ ಸಹಯೋಗದೊಂದಿಗೆ ೨೦೧೪ರ ‘ರಮಣಶ್ರೀ ಶರಣ’ ಉತ್ತೇಜನ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನಪಡುತ್ತದೆ.

ವಚನ ಸಂಗೀತ ಕ್ಷೇತ್ರ

ಡಾ. ಜಯದೇವಿ ಜಂಗಮಶೆಟ್ಟಿ

ಜಯಪುರ ಗ್ವಾಲಿಯರ್ ಘರಾಣೆಯ ಸುಪ್ರಸಿದ್ಧ ಗಾಯಕರಾದ ಪಂಡಿತ್ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟ, ಬೆಳಗಾವಿಯ ಸಂಗೀತ ವಿದುಷಿ ಶ್ರೀಮತಿ ಜಯಶ್ರೀ ಪಾಟೇಕರ ಹಾಗೂ ಪಂಡಿತ್ ರಾಜಶೇಖರ್ ಮನ್ಸೂರ ಅವರಲ್ಲಿ ಸಂಗೀತಾಭ್ಯಾಸ ಮಾಡಿರುವ ಪ್ರತಿಭಾವಂತ ಕಲಾವಿದೆ, ಡಾ. ಜಯದೇವಿ ಜಂಗಮಶೆಟ್ಟಿ,

ಸಂಗೀತದಲ್ಲಿ ವಿದ್ವತ್, ವಿಶಾರದ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ಜಯದೇವಿ ಜಂಗಮಶೆಟ್ಟಿ ಅವರು ವಚನ ಗಾಯನ ಪರಂಪರೆ- ಒಂದು ಸಂಗೀತಾತ್ಮಕ ಅಧ್ಯಯನ’ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿಯನ್ನು ನೀಡಿದೆ. ಪಂಡಿತ ಸಿದ್ಧರಾಮ ಜಂಬಲದಿನ್ನಿ ಕುರಿತು ಸಂಶೋಧನಾತ್ಮಕ ಕೃತಿ ರಚನೆ.

ಡಾ. ಜಯದೇವಿ ಜಂಗಮಶೆಟ್ಟಿ ಧಾರವಾಡ ಆಕಾಶವಾಣಿಯಲ್ಲಿ ಶಾಸ್ತ್ರೀಯ ಮತ್ತು ಸುಗಮ ಸಂಗೀತ ಗಾಯಕಿ ಹಾಗೂ ರಾಗ ಸಂಯೋಜಕಿಯೂ ಹೌದು, ವಚನಗಳು, ಭಜನ್, ದಾಸವಾಣಿ, ರಂಗಗೀತೆ ಹೀಗೆ ಎಲ್ಲಾ ರೂಪದ ಗಾಯನವನ್ನೂ ಜನಪ್ರಿಯತೆ ಗಳಿಸಿದ್ದಾರೆ.

ಗೋಧೂಳಿ, ರಾಗರಂಗ, ಶ್ರೀ ಸಿದ್ದಲಿಂಗೇಶ್ವರ ವಾಣಿ ಎಂಬ ಧ್ವನಿ ಮುದ್ರಿಕೆಗಳನ್ನು ಹೊರತಂದಿದ್ದಾರೆ. ಲಹರಿ ಸಂಸ್ಥೆಯಿಂದ ಗುರುವೇ ನಮೋ, ಹರಿನಾಮಸ್ಮರಣೆ, ಸುನೋ ಭಾಯಿ ಸಾಧೋ ಸಿ.ಡಿ.ಗಳು ಬಂದಿವೆ. ಅನೇಕ ಸಂಘ-ಸಂಸ್ಥೆಗಳಲ್ಲಿ, ಹೊರನಾಡುಗಳಲ್ಲಿ, ಸರ್ಕಾರ ಆಯೋಜಿಸುವ ಸಂಗೀತ ಸಮ್ಮೇಳನಗಳಲ್ಲಿಯೂ ಹಾಡಿದ್ದಾರೆ.

ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಡಾ. ಜಯದೇವಿ ಜಂಗಮಶೆಟ್ಟಿ ಅವರಿಗೆ ಅಮ್ಮ, ವಚನ ಸಂಗೀತ ರತ್ನ, ಸಿದ್ಧರಾಮ ಜಂಬಲದಿನ್ನಿ, ಚೆನ್ನ-ಅಕ್ಕ ಮೊದಲಾದ ಪ್ರಶಸ್ತಿಗಳು ದೊರಕಿವೆ.

ವಚನ ಸಂಗೀತ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಅನುಪಮ ಸೇವೆಗಾಗಿ ಡಾ. ಜಯದೇವಿ ಜಂಗಮಶೆಟ್ಟಿ ಅವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಮಣಶ್ರೀ ಪ್ರತಿಷ್ಠಾನದ ಸಹಯೋಗದೊಂದಿಗೆ ೨೦೧೪ರ ‘ರಮಣಶ್ರೀ ಶರಣ’ ಉತ್ತೇಜನ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನಪಡುತ್ತದೆ.

ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ

ಅಕ್ಕನ ಬಳಗ

ಹನ್ನೆರಡನೆಯ ಶತಮಾನದ ವೀರವಿರಾಗಿಣಿ, ಭಕ್ತಿ, ಜ್ಞಾನ, ವೈರಾಗ್ಯಗಳ ತ್ರಿವೇಣಿ ಸಂಗಮ, ಶಿವಶರಣೆ ಅಕ್ಕಮಹಾದೇವಿಯ ನಾಮಾಂಕಿತದಲ್ಲಿ ರೂಪುಗೊಂಡ “ಅಕ್ಕನ ಬಳಗ’ ಕರ್ನಾಟಕದ ಗಡಿಭಾಗವಾದ ಸೊಲ್ಲಾಪುರದಲ್ಲಿ ೧೯೬೧ ನೇ ಇಸವಿಯಲ್ಲಿ ಸ್ಥಾಪನೆಗೊಂಡಿತು. ಅಕ್ಕನ ಬಳಗ ಸ್ಥಾಪನೆಗೆ ಮೂಲ ಕಾರಣಕರ್ತರು ಮಾತೆಯರಾದ ಪರಾಗಬಾಯಿ ಕನಾಳೆ, ಜಯದೇವಿತಾಯಿ ಲಿಗಾಡೆ, ಸಂಗವ್ವ ತಾಯಿ ಮಡಕಿ, ನಾಗವ್ವಾತಾಯಿ ಬಾವಿ. ‘ಅಕ್ಕನ ಬಳಗ’ ಇಂದು ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯಲು ಇವರೆಲ್ಲ ಶ್ರಮಿಸಿದ್ದಾರೆ.

೧೯೯೫ ರಿಂದ ಶ್ರೀಮತಿ ಶಶಿಕಲಾ ತಾಯಿ ಮಡಕಿ ಅವರ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳೂ ನಡೆಯತೊಡಗಿದವು. ಪುರಾಣ, ವಚನಸ್ಪರ್ಧೆ, ಗಾಯನಸ್ಪರ್ಧೆ, ರಂಗೋಲಿ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ಪಾಕಶಾಸ್ತ್ರ ಸ್ಪರ್ಧೆಗಳ ಮೂಲಕ ಅಕ್ಕನ ಬಳಗ ಜನಪ್ರಿಯತೆ ಗಳಿಸಿದೆ. ರೇಡಿಯೋ ಕಾರ್ಯಕ್ರಮಗಳು, ಪ್ರವಾಸಗಳು, ವೈದ್ಯಕೀಯ ಸೇವೆ ಮೊದಲಾದವು ಸದಸ್ಯರನ್ನು ಕ್ರಿಯಾಶೀಲಗೊಳಿಸಿವೆ.

‘ಬಸವ ಸೆಂಟರ್’ ನವರು ‘ಆದರ್ಶ ಸಂಸ್ಥಾ’ ಎಂಬ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಮಹಿಳಾ ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಿರುವ ಅಕ್ಕನ ಬಳಗ ಇದೀಗ ರಾಷ್ಟ್ರೀಯ ಹಬ್ಬಗಳು, ರಕ್ತದಾನ ಶಿಬಿರಗಳು ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅಕ್ಕನ ಬಳಗದ ಈ ಎಲ್ಲಾ ಹಿರಿಮೆ ಗರಿಮೆಗಳು ಇದುವರೆಗೂ ಶ್ರದ್ದೆ ಮತ್ತು ಆಸಕ್ತಿಯಿಂದ ಸೇವೆ ಸಲ್ಲಿಸಿರುವ ಅಧ್ಯಕ್ಷರುಗಳಿಗೆ ಸಲ್ಲುತ್ತದೆ.

ಹೀಗೆ ಹೊರನಾಡಿನಲ್ಲಿದ್ದರೂ, ತಮ್ಮ ಬಳಗದ ಮೂಲಕ ಶರಣರ ತತ್ವ ಮತ್ತು ಆದರ್ಶಗಳ ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ಸೊಲ್ಲಾಪುರದ ‘ಅಕ್ಕನ ಬಳಗ’ ಕ್ಕೆ ಇನ್ನೂ ಉತ್ತಮ ಭವಿಷ್ಯವನ್ನು ಹಾರೈಸುತ್ತಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರಮಣಶ್ರೀ ಪ್ರತಿಷ್ಠಾನದ ಸಹಯೋಗದೊಂದಿಗೆ ೨೦೧೪ರ ‘ರಮಣಶ್ರೀ ಶರಣ’ ಉತ್ತೇಜನ ಪ್ರಶಸ್ತಿ ನೀಡಿ ಗೌರವಿಸಲು ಅಭಿಮಾನಪಡುತ್ತದೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಗ್ಯಾಲರಿ

ಪ್ರಶಸ್ತಿ ಸಮಾರಂಭದಿಂದ ಸೆರೆಹಿಡಿದ ಕ್ಷಣಗಳನ್ನು ಚಿತ್ರಗಳ ಮೂಲಕ ವೀಕ್ಷಿಸಿ.