೧೯೫೪ ಆಗಸ್ಟ್ ೯ರಂದು ಜನಿಸಿದ ಡಾ. ಸಿ. ಸೋಮಶೇಖರರವರ ಜನ್ಮಸ್ಥಳ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ. ಇವರು ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರರು.
ಡಾ. ಸಿ. ಸೋಮಶೇಖರರವರು ಪದವಿ ಹಂತದಲ್ಲಿಯೇ
ಭಾಷಣ, ಚರ್ಚಾಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದವರು. ಇವರು ವಚನಗಳಲ್ಲಿ ಸಾಮಾಜಿಕ ಚಿಂತನೆ’ ಎಂಬ ಪ್ರೌಢಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ. ಪಡೆದಿದ್ದಾರೆ. ‘ಚಿಂತನ ಚಿಲುಮೆ’ ಎಂಬ ವೈಚಾರಿಕ ಲೇಖನಗಳ ಸಂಗ್ರಹ ಹೊರತಂದಿದ್ದಾರೆ ಮತ್ತು ‘ಚಿಂತನ ಕಿರಣ’ ಎಂಬ ಕೃತಿಯನ್ನು ಸಂಕಲಿಸಿದ್ದಾರೆ.
ಸರ್ಕಾರದ ಹಲವು ಇಲಾಖೆಗಳಲ್ಲಿ ದಕ್ಷತೆಯಿಂದ ಕೆಲಸ ನಿರ್ವಹಿಸಿದ ಕೀರ್ತಿ ಇವರದು. ತುಮಕೂರು ಜಿಲ್ಲಾಧಿಕಾರಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರಿಂದ ಸೈ ಎನ್ನಿಸಿಕೊಂಡ ಇವರು, ಸಹಕಾರ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಸಮ್ಮೇಳನಗಳಲ್ಲಿ ಭಾಗವಹಿಸಿ ಶರಣರ ವಚನಗಳನ್ನು ಎಲ್ಲರಿಗೂ ತಲುಪುವಂತೆ ಪ್ರಚಾರ ಮಾಡಿದ್ದಾರೆ. ವಚನಗಳ ಆಳವಾದ ಅಧ್ಯಯನ ಮತ್ತು ಅವುಗಳ ಸಾಮಾಜಿಕ ಅನ್ವಯೀಕರಣ ಇವೆರಡರಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಸಿ. ಸೋಮಶೇಖರ ಅವರು ವಚನ ಸಾಹಿತ್ಯ ಕುರಿತಂತೆ ಅರ್ಥಪೂರ್ಣವಾಗಿ ಮಾತನಾಡುವ ಪ್ರಾವಿಣ್ಯತೆಯನ್ನು ಸಾಧಿಸಿದವರು.
ಬೆಂಗಳೂರಿನಲ್ಲಿ ‘ಬಸವವೇದಿಕೆ’ ಸಂಸ್ಥೆಯನ್ನು ಸಂಸ್ಥಾಪಿಸಿ, ಶರಣ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಅವರಿಗೆ “ಬಸವ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯವನ್ನು ಇವರು ಮಾಡುತ್ತಿದ್ದಾರೆ.
ಇವರಿಗೆ ವಿವಿಧ ಸಂಘ-ಸಂಸ್ಥೆಗಳು ಮತ್ತು ಮಠ-ಮಾನ್ಯಗಳು ಹಲವಾರು ಬಿರುದುಗಳನ್ನು ನೀಡಿ ಸನ್ಮಾನಿಸಿವೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಇವರಿಗೆ ೨೦೧೬ರ ‘ಜೀವಮಾನ ಸಾಧನೆ ಸನ್ಮಾನ’ ನೀಡಿ ಗೌರವಿಸಲು ಹರ್ಷಿಸುತ್ತವೆ.
ಶರಣ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಲೇಖಕರನ್ನು ಸನ್ಮಾನಿಸಲಾಯಿತು.
೧೯೫೦ ಮೇ ೬ರಂದು ಮೈಸೂರಿನಲ್ಲಿ ಜನಿಸಿದ ಡಾ. ಮ.ನ. ಜವರಯ್ಯ ಅವರು ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರರು ಮತ್ತು ಅದೇ ವಿಶ್ವವಿದ್ಯಾಲಯದ ಕಾನೂನು ಪದವೀಧರರು.
ಕಾವ್ಯ, ಸಣ್ಣಕಥೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಜೀವನ ಚರಿತ್ರೆ ಮತ್ತು ಅನುವಾದ ಈ ಎಲ್ಲ ಪ್ರಕಾರಗಳಲ್ಲೂ ಪ್ರಬುದ್ಧತೆ ಪಡೆದಿರುವ ಡಾ. ಜವರಯ್ಯನವರು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ೩೦೦ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ಮತ್ತು ೩೨ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ‘ಪ್ರಾಚೀನ ಕರ್ನಾಟಕದಲ್ಲಿ ದಲಿತ ಶೈವ ಸಂತರು-ಒಂದು ಅಧ್ಯಯನ’ ಅವರ ಪಿಹೆಚ್.ಡಿ ಮಹಾಪ್ರಬಂಧ, ‘ಕನ್ನಡ ಸಾಹಿತ್ಯದಲ್ಲಿ ದಲಿತ ಬಂಡಾಯ ಪರಂಪರೆ’ ಮತ್ತು ‘ಡಾ. ಬಿ.ಆರ್. ಅಂಬೇಡ್ಕರ್-ಒಂದು ಅಧ್ಯಯನ’ ಜವರಯ್ಯನವರ ಎರಡು ಮಹತ್ವದ ಗ್ರಂಥಗಳು, ವಚನಕಾರರ ವಿಚಾರಕ್ರಾಂತಿಯನ್ನು ಕುರಿತು ಅವರು ವಿಶೇಷ ಅಧ್ಯಯನ ಮಾಡಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಡಾ. ಜವರಯ್ಯನವರು ಮೈಸೂರು ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯಗಳ ನಾನಾ ಶೈಕ್ಷಣಿಕ ಮಂಡಳಿಗಳಲ್ಲಿ ಸದಸ್ಯರಾಗಿ ತಮ್ಮ ಅನುಭವದ ಧಾರೆ ಎರೆದಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೇ ಅಲ್ಲದೆ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ಡಾ ಹೆಚ್. ನರಸಿಂಹಯ್ಯ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಹೀಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವ ಡಾ. ಮ.ನ. ಜವರಯ್ಯನವರು ಪ್ರಸ್ತುತ ಕರ್ನಾಟಕ ಉಚ್ಛ ನ್ಯಾಯವಾದಿಗಳಾಗಿದ್ದಾರೆ.
ವಚನಸಾಹಿತ್ಯ ಕುರಿತ ಸಂಶೋಧನೆ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ೨೦೧೬ರ ‘ರಮಣಶ್ರೀ ಶರಣ ಪ್ರಶಸ್ತಿ’ಯನ್ನು ನೀಡಿ ಗೌರವಿಸಲು ಅಭಿಮಾನಪಡುತ್ತವೆ.
ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ತತ್ತ್ವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿ ವಿಶ್ರಾಂತ ಜೀವನ ನಡೆಸುತ್ತಿರುವ ಇವರು ಜೂನ್ ೧, ೧೯೫೦ರಲ್ಲಿ ಧಾರವಾಡ ಜಿಲ್ಲಾ ಕಲಘಟಗಿ ತಾಲ್ಲೂಕು ಹುಲ್ಲಂಬಿ ಗ್ರಾಮದಲ್ಲಿ ಜನಿಸಿದರು. ಇಂಟರ್ ನ್ಯಾಷನಲ್ ಕಾಂಗ್ರೆಸ್ ಆಫ್ ಸೋಷಿಯಲ್ ಫಿಲಾಸಫಿ, ಇಂಟರ್ ನ್ಯಾಷನಲ್ ಕಾಂಗ್ರೆಸ್ ಆಫ್ ಯೋಗ ಮತ್ತು ಆಧ್ಯಾತ್ಮಿಕ ವಿಜ್ಞಾನ ಮತ್ತು ಕರ್ನಾಟಕ ದರ್ಶನ ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷರಾಗಿ ಗೌರವ ಹುದ್ದೆಗಳನ್ನು ಹೊಂದಿದ್ದಾರೆ. ಜೊತೆಗೆ ೪೦ ವರ್ಷಗಳ ಬೋಧನ ಅನುಭವ ಹೊಂದಿದ್ದು ಯು.ಜಿ.ಸಿ.ಯ ಸಂದರ್ಶನ ಸಮಿತಿಯ ಸದಸ್ಯರಾಗಿದ್ದಾರೆ.
ಭಾರತೀಯ ತತ್ತ್ವಶಾಸ್ತ್ರ, ಯೋಗ ದರ್ಶನ, ಶಿಕ್ಷಣ ತತ್ತ್ವಶಾಸ್ತ್ರ, ಗಾಂಧೀ ದರ್ಶನ, ಸಮಾಜೋ-ರಾಜಕೀಯ ದರ್ಶನ, ಧರ್ಮ ಮೀಮಾಂಸೆ, ಶರಣ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರಗಳಲ್ಲಿ ಆಳವಾದ ಅಧ್ಯಯನ ಇವರದು.
ವಚನ ಸಾಹಿತ್ಯ ಕುರಿತಂತೆ ಅನೇಕ ಮೌಲಿಕ ಗ್ರಂಥಗಳನ್ನು, ಅದರಲ್ಲೂ ವಿಶೇಷವಾಗಿ ಅಂಬಿಗರ ಚೌಡಯ್ಯನನ್ನು ಕುರಿತು ವಿಶೇಷವಾದ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ವೈಚಾರಿಕ ಹಿನ್ನೆಲೆಯ ವಚನ ರಚನೆಯಲ್ಲಿ ಇವರದು ವಿನೂತನ ರೀತಿ, ನಲವತ್ತು ವರ್ಷಗಳ ಸುಧೀರ್ಘ ಬೋಧನಾ ಸೇವೆಯಲ್ಲಿ ಸಾರ್ಥಕತೆಯನ್ನು ಪಡೆದ ಸಂತೃಪ್ತಿ ಇವರಿಗಿದೆ. ಶ್ರೀ ಮುರುಘ ರಾಜೇಂದ್ರ ಮಠದ ಪ್ರಶಸ್ತಿ, ನವದೆಹಲಿ ಎಸ್.ಐ.ಸಿ. ಸಂಸ್ಥೆಯಿಂದ ಜೀವಮಾನ ಪ್ರಶಸ್ತಿ, ವಿಜಯ ಮಹಾಂತೇಶ್ವರ ಮಠ, ಇಳಕಲ್ ಅವರಿಂದ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ದೇಶ ವಿದೇಶಗಳ ಹಲವಾರು ರಾಷ್ಟ್ರೀಯ-ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿರುವ ಇವರು ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ, ವಚನ ರಚನೆಯಲ್ಲಿ ಮಾನ್ಯರ ಗಣನೀಯ ಸೇವೆಗಾಗಿ ೨೦೧೬ ರಮಣಶ್ರೀ ಶರಣ ಪ್ರಶಸ್ತಿ’ಯನ್ನು ನೀಡಿ ಅಭಿಮಾನಪಡುತ್ತವೆ.
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ, ಹಾಗೆಯೇ ಭಕ್ತಿಗೀತೆ, ಭಾವಗೀತೆ ಪ್ರಕಾರಗಳಲ್ಲಿ ಅನನ್ಯ ಸಾಧನೆ ಮಾಡಿರುವ ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿ ಅವರು ಭಾರತೀಯ ಯುವ ಸಮುದಾಯದ ಅಗ್ರಮಾನ್ಯ ಕಲಾವಿದರು. ೧೯೭೦ ಅಕ್ಟೋಬರ್ ೭ ರಂದು ಡಾ. ಹೆಚ್.ಎ. ಕಟ್ಟಿ ಮತ್ತು ಶ್ರೀಮತಿ ಭಾರತೀ ಕಟ್ಟಿ ಅವರ ಪುತ್ರಿಯಾಗಿ ಇವರು ಜನಿಸಿದರು.
ಪ್ರಾರಂಭಿಕ ಹಂತದಲ್ಲಿ ತಂದೆಯವರಿಂದಲೇ ಸಂಗೀತವನ್ನು ಕಲಿಯಲಾರಂಭಿಸಿದ ಇವರಿಗೆ ೪ನೆಯ ವಯಸ್ಸಿನಲ್ಲಿಯೇ ಸಂಗೀತ ಸಾಮ್ರಾಟ ನೌಷಾದ್ అలి ಅವರ ಆಶೀರ್ವಾದ ದೊರಕಿತು. ಆನಂತರದಲ್ಲಿ ಇವರು ಪದ್ಮಭೂಷಣ ಪಂಡಿತ ಬಸವರಾಜ ರಾಜಗುರು ಅವರಿಂದ ಕಿರಾಣ ಘರಾಣ ಶಾಸ್ತ್ರೀಯ ಸಂಗೀತದ ದೀಕ್ಷೆ ಪಡೆದರು. ನಂತರ ತಮ್ಮ ನಿರಂತರ ಸಾಧನೆಯ ಮೂಲಕ ಶಾಸ್ತ್ರೀಯಸಂಗೀತ, ಭಜನೆ, ವಚನಗಳು, ಭಾವಗೀತೆ, ಜಾನಪದಗೀತೆ ಕ್ಷೇತ್ರಗಳ ಜೊತೆಗೆ ಹಿನ್ನೆಲೆ ಸಂಗೀತಗಾರರಾಗಿಯೂ ಪ್ರಸಿದ್ಧರಾಗಿದ್ದಾರೆ.
ಮೈಸೂರು ದಸರಾ, ಹಂಪಿ ಉತ್ಸವ, ಸವಾಯಿ ಗಂಧರ್ವ ಸಂಗೀತೋತ್ಸವ, ಮಹಾಕುಂಭಮೇಳ, ಸೂರಜ್ ಕುಂಡ ಕುಂಭಮೇಳ, ರಾಷ್ಟ್ರೀಯ ಸಂಗೀತ ಸಭೆ, ರಾಷ್ಟ್ರೀಯ ಏಕತೆ ಸಭೆ, ಸಹ್ಯಾದ್ರಿ ಉತ್ಸವ, ನವರಸಪುರ ಉತ್ಸವ, ಕರಾವಳಿ ಉತ್ಸವ, ಇಂಡೋ-ಕೆನೆಡಿಯನ್ ಉತ್ಸವ ಕೆನಡಾ, ಬಸಂತ್ ಬಹಾರ್ ಉತ್ಸವಗಳಲ್ಲಿ ಭಾಗವಹಿಸಿದ್ದಾರೆ. ಅಮೆರಿಕಾ ಮತ್ತು ಇತರ ಹಲವಾರು ಹೊರದೇಶಗಳಲ್ಲೂ ತಮ್ಮ ಸಂಗೀತ ಸುಧೆಯನ್ನು ಹರಿಸಿದ್ದಾರೆ.
ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-೨೦೦೬, ಪಂಡಿತ್ ಬಸವರಾಜ ರಾಜಗುರು ರಾಷ್ಟ್ರೀಯ ಪುರಸ್ಕಾರ-೨೦೧೧, ಇವುಗಳನ್ನು ಒಳಗೊಂಡ ಹಾಗೆ ಹಲವಾರು ಶ್ರೇಷ್ಠ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿ ಜನಪ್ರಿಯರಾಗಿದ್ದಾರೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿ ಅವರಿಗೆ ವಚನ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಗಾಗಿ ೨೦೧೬ರ ‘ರಮಣಶ್ರೀ ಶರಣ ಪ್ರಶಸ್ತಿ’ಯನ್ನು ನೀಡಿ ಗೌರವಿಸಲು ಅಭಿಮಾನಪಡುತ್ತವೆ.
ವಿಶ್ವದ ದಾರ್ಶನಿಕರ ಹಾಗೂ ಅನುಭಾವಿಗಳ ಪರಂಪರೆಗೆ ಕರ್ನಾಟಕ ನೀಡಿದ ಮಹಾನ್ ಕೊಡುಗೆ ಅಕ್ಕಮಹಾದೇವಿ, ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಉಡುತಡಿ ಗ್ರಾಮದಲ್ಲಿ ಜನಿಸಿ, ದೊರೆತ ರಾಜ್ಯ ಸಂಪತ್ತು, ಭೋಗ-ಭಾಗ್ಯ ಮತ್ತು ಲೌಕಿಕ ಬದುಕನ್ನು ನಿರಾಕರಿಸಿ, ತನ್ನಿಷ್ಟದ ದೇವ ಮಲ್ಲಿಕಾರ್ಜುನನನ್ನು ಪತಿಯಾಗಿ ಅರಸಿಕೊಂಡ ಅಕ್ಕಮಹಾದೇವಿಯ ಜೀವನವೇ ಒಂದು ಅದ್ಭುತ ಮಹಾಕಾವ್ಯ.
ಇಂತಹ ಪ್ರಸಿದ್ಧವಾದ ಉಡುತಡಿ ಗ್ರಾಮ ಇಂದು ಐತಿಹಾಸಿಕ ಸ್ಥಳವಾಗಿ, ಪ್ರವಾಸಿ ತಾಣವಾಗಿ, ಪವಿತ್ರ ಕ್ಷೇತ್ರವಾಗಿ ನಾಡಿನ ಮೂಲೆಮೂಲೆಯಿಂದ ಜನರನ್ನು ಆಕರ್ಷಿಸುವಂತೆ ಮಾಡಿದ ಯಶಸ್ಸು ಅಕ್ಕಮಹಾದೇವಿ ಸಮಿತಿಗೆ ಸಲ್ಲುತ್ತದೆ.
ಸಾಮಾನ್ಯ ಗೃಹಿಣಿಯಾದ, ರಾಜಕಾರಿಣಿಯಾದ, ಸಾಹಿತಿಯಾದ, ಸಾಮಾಜಿಕ ಕಾರ್ಯಕರ್ತೆಯಾದ ಹಾಗೂ ಬಹುಮುಖ ಪ್ರತಿಭೆಯುಳ್ಳ ಅಪರೂಪದ ಮಹಿಳೆ ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್ ಅವರು ಅಕ್ಕಮಹಾದೇವಿ ಸಮಿತಿ ಉಡುತಡಿಯ ಅಧ್ಯಕ್ಷರು. ತುಂಬಾ ಕ್ರಿಯಾಶೀಲವಾಗಿ ಅಕ್ಕನ ಬದುಕು-ಸಾಧನೆಗಳನ್ನು ವರ್ತಮಾನದ ಜಗತ್ತಿಗೆ ಪರಿಚಯಿಸುತ್ತಿರುವ ಈ ಸಮಿತಿಯು ಉಡುತಡಿಯಲ್ಲಿ ದೂರದೃಷ್ಟಿಯುಳ್ಳ ಅನೇಕ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಉಡುತಡಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಅಕ್ಕನ ಬಯಲು ರಂಗಮಂದಿರವನ್ನು ನಿರ್ಮಿಸಲಾಗಿದೆ. ಇಲ್ಲಿ ಸುಂದರವಾದ ಅಕ್ಕಮಹಾದೇವಿಯ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಉಡುತಡಿಯಿಂದ, ಆಂಧ್ರ ಪ್ರದೇಶದಲ್ಲಿರುವ ಕದಳಿಗೆ ನೂರಾರು ಶರಣೆಯರನ್ನು ಸಂಘಟಿಸಿಕೊಂಡು ಪ್ರವಾಸವನ್ನು ಏರ್ಪಡಿಸಿದ ಹೆಗ್ಗಳಿಕೆ ಅಕ್ಕಮಹಾದೇವಿ ಸಮಿತಿಗೆ ಸಲ್ಲುತ್ತದೆ. ಜೊತೆಗೆ ಇನ್ನೂ ಹಲವಾರು ಕಾರ್ಯಚಟುವಟಿಕೆಗಳ ಮೂಲಕ ಉಡುತಡಿಗೆ ಹೊಸ ಸ್ವರೂಪ ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್ ಅವರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ, ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್‌ರವರ ನೇತೃತ್ವದಲ್ಲಿ ಅಕ್ಕಮಹಾದೇವಿಯ ಉಡುತಡಿ ಕ್ಷೇತ್ರವನ್ನು ಸಮಗ್ರವಾಗಿ ಬೆಳೆಸಿದ ಹಿನ್ನಲೆಯಲ್ಲಿ ಅಕ್ಕಮಹಾದೇವಿ ಸಮಿತಿಗೆ ೨೦೧೬ರ ‘ರಮಣಶ್ರೀ ಶರಣ ಪ್ರಶಸ್ತಿ’ಯನ್ನು ನೀಡಿ ಗೌರವಿಸಲು ಅಭಿಮಾನ ಪಡುತ್ತದೆ. ಇದು ಅಕ್ಕಮಹಾದೇವಿ ಸಮಿತಿಗೆ ಸಲ್ಲುತ್ತಿರುವ ಪ್ರಶಸ್ತಿಯಾದರೂ, ಅದರ ಹಿಂದಿರುವ ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್ ಮತ್ತು ಇನ್ನಿತರ ಹಲವಾರು ಕಾರ್ಯಕರ್ತರ ಶ್ರಮ ಮತ್ತು ತ್ಯಾಗಗಳನ್ನೂ ಗೌರವಿಸುತ್ತದೆ.
ಶರಣ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮಾರ್ಗವನ್ನು ತೋರಿದ ಮತ್ತು ಇತರರಿಗೆ ಪ್ರೇರೇಪಿಸುವ ವ್ಯಕ್ತಿಗಳನ್ನು ಗೌರವಿಸಲಾಯಿತು.
‘ರಘುಶಂಖ’ ಕಾವ್ಯನಾಮದಿಂದ ಪರಿಚಿತ ರಾಗಿರುವ ಇವರು ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದವರು. ೧೯೭೦ ಜನವರಿ ೧ ರಂದು ಶ್ರೀಮತಿ ಗುರಮ್ಮ ಮತ್ತು ಶ್ರೀ ಶಂಕರಪ್ಪ ಖರಾಬೆ ಅವರ ಸುಪುತ್ರರಾಗಿ ಜನಿಸಿದವರು.
ಡಾ. ಶರಣಬಸವಪ್ಪ ಅಪ್ಪ ಜೀವನ ಸಾಧನೆ, ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ಶ್ರೀಯುತರ ಸಂಶೋಧನೆಯ ಎರಡು ಮಹತ್ವದ ಕ್ಷೇತ್ರಗಳಾಗಿವೆ. ‘ಎರಡು ಮುಖ’ ಮತ್ತು ‘ಹೃದಯಾಳದ ನೋವುಗಳು’ ಇವರ ಎರಡು ಕವನ ಸಂಕಲನಗಳು, ಇವರ ವಚನ ಸಾಹಿತ್ಯದ ಹೊಸ ಪರಿಕಲ್ಪನೆ, ಕರ್ನಾಟಕೇತರ ಶರಣ ಶರಣೆಯರು, ಶ್ರೀಗಂಧ, ಪ್ರಭುರಾವ ಕಂಬಳಿವಾಲೆ, ವಚನಕಾರರ ವೃತ್ತಿ ಮೌಲ್ಯಗಳು, ವಚನ ಸಂವಾದ, ಭೂಮಿಕೆ, ಮಹಾದಾಸೋಹ ಪಥಿಕ, ಅಟ್ಟಳೆನಾಡಿನ ಅಣಿಮುತ್ತುಗಳು, ವರ್ತಮಾನದೊಡಲು ಇತ್ಯಾದಿ ಕೃತಿಗಳು ವಚನ ಸಾಹಿತ್ಯ ಕ್ಷೇತ್ರದಲ್ಲಿ ಹೆಗ್ಗಳಿಕೆ ಪಡೆದಿವೆ.
ಬೀದರ್ ಪ್ರದೇಶದ ಸ್ವಾತಂತ್ರ್ಯ ಸಂಗ್ರಾಮ ಕುರಿತು ೨೦೧೫- ೧೬ನೇ ಸಾಲಿನಲ್ಲಿ ಸಂಶೋಧನೆ ಮಾಡಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರಿಂದ ಒಂದು ಲಕ್ಷ ರೂಪಾಯಿಗಳ ಫೆಲೋಶಿಪ್ ಪಡೆದಿದ್ದಾರೆ. ಹಾಗೆಯೇ ಹಲವಾರು ಸಂಘ-ಸಂಸ್ಥೆಗಳು ಇವರನ್ನು ಗೌರವಿಸಿವೆ. ಸಂಶೋಧನೆ, ಸಂಪಾದನೆ, ವಿಮರ್ಶೆ, ಸೃಜನಶೀಲ ನೆಲೆಯ ಆಯಾಮಗಳನ್ನು ಮುಖಾಮುಖಿಯಾಗಿಸುವ ಉತ್ತಮ ಬರಹಗಾರರಾಗಿದ್ದಾರೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಡಾ. ರಘುಶಂಖ ಭಾತಂಬ್ರಾ ಅವರ ವಚನ ಸಂಶೋಧನಾ ಕಾರ್ಯಕ್ಕೆ ಮನ್ನಣೆಯಾಗಿ ೨೦೧೬ರ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ ನೀಡಿ ಗೌರವಿಸಲು ಅಭಿಮಾನಪಡುತ್ತವೆ.
ಕವಿಯತ್ರಿ, ಲೇಖಕಿ, ರಂಗಭೂಮಿ ನಟಿಯಾದ ಶ್ರೀಮತಿ ಬಿ. ಸ್ವರ್ಣಗೌರಿ ಅವರು ಮೂಲತಃ ಔಷಧ ವಿಜ್ಞಾನದ ಪದವೀಧರೆಯಾದರೂ ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿ-ಅಭಿರುಚಿ ಹೊಂದಿದವರು. ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಬಸಪ್ಪ-ಪ್ರಭುಶಾಂತಮ್ಮನವರ ಪುತ್ರಿ ವಚನ ಸಾಹಿತ್ಯದಿಂದ ಪ್ರಭಾವಿತರಾಗಿದ್ದು, ತಾಯಿ ಪ್ರಭುಶಾಂತಮ್ಮನವರಿಂದ ಮಾರ್ಗದರ್ಶನ ಪಡೆದ ಇವರು, ಮದುವೆಯ ನಂತರ ಪತಿಯ ಮನೆಯಲ್ಲೂ ಅಧ್ಯಯನ ಮುಂದುವರೆಸಿ ಶರಣ ಸಾಹಿತ್ಯ ಕುರಿತ ಅನೇಕ ಲೇಖನಗಳನ್ನು ಬರೆದಿದ್ದಾರೆ. ಕವಿ ಮನೋಭಾವದ ಇವರು ಆಧುನಿಕ ವಚನ ರಚನೆಯಲ್ಲಿಯೂ ಮಹತ್ವದ ಕಾರ್ಯ ಮಾಡಿದ್ದಾರೆ.
‘ಭಾವ ತುಂತುರು’ ಇವರ ಕವನ ಸಂಕಲನ. ವೃತ್ತಿ ರಂಗಭೂಮಿ ನಟಿಯರ ಜೀವನದ ಏಳು-ಬೀಳುಗಳನ್ನಾಧರಿಸಿದ ೨೫ : ವ್ಯಕ್ತಿ ಚಿತ್ರಣಗಳನ್ನು ಮಾಸಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಈ ಲೇಖನಗಳು ‘ರಂಗಭೂಮಿಯ ರಾಗಿಣಿಯರು’ ಶೀರ್ಷಿಕೆಯೊಂದಿಗೆ ಪ್ರಕಟಣೆಗೆ ಸಿದ್ಧಗೊಂಡಿದೆ. ಇದಲ್ಲದೆ ಕೊಡುಗೈ ದಾನಿಗಳ ಜೀವನವನ್ನಾಧರಿಸಿದ ‘ನೆನೆ ಮನವೇ’ ಹೊತ್ತಗೆಯೂ ಪ್ರಕಟಗೊಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ, ರಾಷ್ಟ್ರೀಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡ ಅನುಭವ ಇವರಿಗಿದೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಶ್ರೀಮತಿ ಬಿ. ಸ್ವರ್ಣಗೌರಿ ಅವರಿಗೆ ವಚನ ರಚನೆಗಾಗಿ ೨೦೧೬ರ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲು ಅಭಿಮಾನಪಡುತ್ತವೆ.
ನಾಡಿನ ಹೆಸರಾಂತ ಸಂಗೀತಗಾರರಾದ ಶ್ರೀ ಫಕಿರೇಶ ಕಣವಿ ಮತ್ತು ಶಾಂತಾ ಕಣವಿ ಅವರ ಪುತ್ರಿಯಾದ ಕುಮಾರಿ ಮಾಲಾಶ್ರೀ ಎಫ್. ಕಣವಿ ಅವರು ಜನಿಸಿದ್ದು ೧೯೮೭ ಸೆಪ್ಟೆಂಬರ್ ೨ ರಂದು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸಂಗೀತದ ಪದವೀಧರರು.
ತಂದೆಯಿಂದಲೇ ಸಂಗೀತಾಭ್ಯಾಸ ದೊರೆತುದು ಅವರಿಗೆ ವರದಾನವಾಯಿತು. ಬಾಲ್ಯದಿಂದಲೇ ಸಂಗೀತವನ್ನು ಉಸಿರಾಗಿ ಮಾಡಿಕೊಂಡ ಇವರು ಅತ್ಯಂತ ಕಡಿಮೆ ಅವಧಿಯಲ್ಲಿಯೇ ನಾಡಿನ ಹೆಸರಾಂತ ಗಾಯಕಿಯಾಗಿ ಮಿಂಚಿದವರು. ಸುಗಮ ಸಂಗೀತ ವಿಭಾಗದಲ್ಲಿ ಆಕಾಶವಾಣಿಯ ‘ಎ’ ಗ್ರೇಡ್ ಮತ್ತು ಹಿಂದೂಸ್ಥಾನಿ ಶಾಸ್ತ್ರೀಯ ವಿಭಾಗದಲ್ಲಿ ಬಿ ‘ಹೈ’ ಗ್ರೇಡ್ ಕಲಾವಿದೆಯಾಗಿರುವ ಅವರು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಅಸಂಖ್ಯ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಖ್ಯಾತಿ ಸಂಪಾದಿಸಿದ್ದಾರೆ.
ನಾಡು ಹಾಗೂ ಹೊರನಾಡುಗಳಲ್ಲಿ ನೂರಾರು ಸಂಗೀತ ಕಚೇರಿಗಳನ್ನು ನೀಡಿರುವ ಹೆಗ್ಗಳಿಕೆ ಇವರಿಗಿದೆ. ಈ-ಟಿ.ವಿ. ವಾಹಿನಿಯ ಸುಪ್ರಸಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಅಂತಿಮ ಘಟ್ಟದವರೆಗೂ ತಲುಪಿ ಪ್ರಶಸ್ತಿಯನ್ನು ಗೆದ್ದುಕೊಂಡ ಕೀರ್ತಿ ಇವರದು. ಶಾಸ್ತ್ರೀಯಸಂಗೀತದ ಜೊತೆಗೆ ಭಕ್ತಿಗೀತೆ, ಭಾವಗೀತೆಗಳನ್ನು ಶುಶ್ರಾವ್ಯವಾಗಿ ಪ್ರಸ್ತುತಪಡಿಸುವ ಇವರು ವಚನ ಗಾಯನದಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ್ದಾರೆ. ಹಲವಾರು ಧ್ವನಿಮುದ್ರಿಕೆಗಳು ನಾಡಿನಲ್ಲೆಲ್ಲಾ ಜನಪ್ರಿಯವಾಗಿವೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ಮಾಲಾಶ್ರೀ ಎಫ್. ಕಣವಿ ಅವರಿಗೆ ವಚನ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಗಾಗಿ ೨೦೧೬ರ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲು ಹರ್ಷಿಸುತ್ತವೆ.
೨೦೦೪ರಲ್ಲಿ ‘ವಿಶ್ವಭಾರತಿ ರಮ್ಯ ನಾಟಕ ಸಂಘ’ವನ್ನು ಕುಂದಗೋಳ ತಾಲ್ಲೂಕಿನ ಶಿರೂರಿನಲ್ಲಿ ಸ್ಥಾಪಿಸಿ, ವಿಶಿಷ್ಟ ನೀತಿ ಬೋಧಕ, ವಿಚಾರ ಪ್ರಚೋದಕ ನಾಟಕಗಳನ್ನು ನಾಡಿನ ತುಂಬೆಲ್ಲ ಪ್ರದರ್ಶಿಸಿದವರು ಬಸವರಾಜ ಬೆಂಗೇರಿ, ಗ್ರಾಮೀಣ
ರಂಗಕಲಾವಿದರಾದ ಇವರದು ಬೆರಗುಗೊಳಿಸುವ ಸಾಧನೆ. ಇಪ್ಪತ್ತೈದು ವರ್ಷಗಳ ಬಣ್ಣದ ಬದುಕಿನಲ್ಲಿ ಸಿಹಿ-ಕಹಿ ಅನುಭವಗಳನ್ನು ಅರಗಿಸಿಕೊಳ್ಳುತ್ತ, ಕೃಷಿ ಕಾಯಕದ ಜೊತೆಗೆ ರಂಗನಾಯಕನಾಗಿ ಬೆಳೆಯುತ್ತ ಉತ್ತರ ಕರ್ನಾಟಕದ ನಾಟಕ ಪ್ರೇಮಿಗಳ ಮನದಲ್ಲಿ ಸ್ಥಾಯಿಯಾಗಿದ್ದಾರೆ. ನಾಟಕವನ್ನು ಒಂದು ಶ್ರದ್ಧಾಪೂರ್ವಕವಾದ ಕಾಯಕವೆಂದೇ ಪರಿಗಣಿಸಿರುವ ಇವರು ಶರಣರ ವೈಚಾರಿಕ ಕ್ರಾಂತಿಗೆ ರಂಗರೂಪ ಕೊಡುತ್ತಾ ಬಂದಿರುವ ರಂಗಜಂಗಮ.
ಬಸವರಾಜ ಬೆಂಗೇರಿ ಅವರು ಐದು ನಾಟಕಗಳನ್ನು ರಚಿಸಿದ್ದಾರೆ. ೧೨ ಹೆಸರಾಂತ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ೩ ಸ್ವರಚಿತ ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ. ೪ ಪ್ರಸಿದ್ಧ ನಾಟಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಸಂಘ-ಸಂಸ್ಥೆಗಳೊಡನೆ ಸಂಪರ್ಕವಿರಿಸಿಕೊಂಡಿದ್ದಾರೆ. ಹೊರ ರಾಜ್ಯಗಳಲ್ಲಿ, ದೂರದರ್ಶನದಲ್ಲಿ ಮತ್ತು ಸರಕಾರಿ ಕಾರ್ಯಕ್ರಮಗಳಲ್ಲಿಯೂ ಸಹ ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ. ೫ ರೇಡಿಯೋ ನಾಟಕಗಳನ್ನು ಪ್ರಸಾರಿಸಿದ್ದಾರೆ.
ಸಮಾಜದಲ್ಲಿ ಸಾಮರಸ್ಯವನ್ನುಂಟುಮಾಡುವ ಹಾಗೂ ಸಹಬಾಳ್ವೆಯ ಸಿದ್ಧಾಂತವನ್ನು ಸಾರುವ ನಾಟಕಗಳ ಮೂಲಕ ಜನರ ಮನಸ್ಸನ್ನು ಗೆದ್ದ ವಿಶ್ವಭಾರತಿ ರಮ್ಯ ನಾಟಕ ಸಂಘವು, ಶರಣರ ವೈಚಾರಿಕ ಚಿಂತನೆಗಳ ಪ್ರಚಾರದಲ್ಲಿಯೂ ಮುಂಚೂಣಿಯಲ್ಲಿದೆ. ಇಂಥ ಸಂಘದ ರೂವಾರಿ ಬಸವರಾಜ ಬೆಂಗೇರಿ ಅವರು.
‘ಜಗಜ್ಯೋತಿ ಬಸವೇಶ್ವರ’ ನಾಟಕವನ್ನು ಕರ್ನಾಟಕ ಮತ್ತು ಹೊರ ರಾಜ್ಯಗಳಲ್ಲೂ ಪ್ರದರ್ಶಿಸಿ ಶಿವಶರಣರ ಮೌಲ್ಯಗಳನ್ನು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದ ಕೀರ್ತಿ ಇವರದು. ಇವರ ನಾಟಕ ಪ್ರದರ್ಶನವನ್ನು ಮೆಚ್ಚಿ ಸರಕಾರ, ಹಲವಾರು ಮಠಗಳು ಮತ್ತು ಸಂಘಸಂಸ್ಥೆಗಳು ಸನ್ಮಾನಿಸಿವೆ, ಸತ್ಕರಿಸಿವೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ವಿಶ್ವಭಾರತಿ ರಮ್ಯ ನಾಟಕ ಸಂಘದ ರೂವಾರಿ ಶ್ರೀ ಬಸವರಾಜ ಬೆಂಗೇರಿ ಅವರಿಗೆ ರಂಗಭೂಮಿಯ ಮೂಲಕ ಶರಣ ತಮ್ಮ ಪ್ರಚಾರ ಸೇವೆಗಾಗಿ ೨೦೧೬ರ ‘ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲು ಅಭಿಮಾನಪಡುತ್ತವೆ.
Copyright © 2024 Ramanashree Awards . All Rights Reserved. Crafted by Pixelsbrew