ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ

2017

ರಮಣಶ್ರೀ ಶರಣ ಜೀವಮಾನ ಸಾಧನ ಸನ್ಮಾನ

ನಾಡೋಜ ಡಾ. ಎಂ. ಚಿದಾನಂದಮೂರ್ತಿ

ಸಂಶೋಧನೆ ಶಬ್ದಕ್ಕೆ ನಿಜಾರ್ಥ ತಂದುಕೊಟ್ಟ ಮೇರುಸಂಶೋಧಕರು ನಾಡೋಜ ಡಾ. ಎಂ. ಚಿದಾನಂದಮೂರ್ತಿ ಅವರು. ಕನ್ನಡ ನಾಡು ಹೆಮ್ಮೆ ಪಡುವಂಥ ಕೆಲವೇ ಸಂಶೋಧಕರಲ್ಲಿ ಅವರಿಗೆ ಅಗ್ರಸ್ಥಾನ ಸಲ್ಲುತ್ತದೆ.

ಶಾಸನ, ಹಳಗನ್ನಡ ಸಾಹಿತ್ಯ-ಸಂಸ್ಕೃತಿ, ವಚನ ಸಾಹಿತ್ಯ, ಭಾಷಾಶಾಸ್ತ್ರ ಮತ್ತು ಜಾನಪದ ಅವರ ಸಂಶೋಧನಾಸಕ್ತಿಯ ಮುಖ್ಯ ಕ್ಷೇತ್ರಗಳು, ಶರಣರು ಪ್ರಯೋಗಿಸಿದ ‘ಜಂಗಮ’ ತತ್ವಕ್ಕೆ ಅರ್ಥ ತರುವ ಹಾಗೆ ನಾಡಿನ ತುಂಬೆಲ್ಲಾ ಓಡಾಡಿ ಶಾಸನಗಳನ್ನು ಸಂಶೋಧಿಸಿದ ಅವರು ಅವುಗಳ ಸಾಂಸ್ಕೃತಿಕ ಮುಖಗಳನ್ನು “ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ದ ಮೂಲಕ ದರ್ಶಿಸಿದ್ದಾರೆ.

ನಾಡೋಜ ಡಾ. ಎಂ. ಚಿದಾನಂದಮೂರ್ತಿ ಅವರ ಅಧ್ಯಯನ ಮತ್ತು ಸಂಶೋಧನಾ ಸಕ್ತಿಯ ಬಹುಮುಖ್ಯ ಕ್ಷೇತ್ರ ವಚನ ಸಾಹಿತ್ಯ, ವಚನಗಳ ಮೂಲ ನೆಲೆ ಮತ್ತು ಅರ್ಥಗಳನ್ನು ಶೋಧಿಸಿ ಅವುಗಳ ಸಾರ್ವಕಾಲಿಕತೆಯನ್ನು ದಾಖಲಿಸುವ ಅವರ ಹತ್ತಾರು ಸಂಶೋಧನಾತ್ಮಕ ಕೃತಿಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಗ್ರಶ್ರೇಣಿಯಲ್ಲಿ ನಿಲ್ಲುತ್ತವೆ. ಶೂನ್ಯ ಸಂಪಾದನೆಯನ್ನು ಕುರಿತು, ವಚನ ಸಾಹಿತ್ಯ, ಲಿಂಗಾಯತ ಅಧ್ಯಯನಗಳು, ವಚನಶೋಧ, ವೀರಶೈವ ಧರ್ಮ ಆ ಮತ್ತು ಭಾರತೀಯ ಸಂಸ್ಕೃತಿ, ಬಸವಣ್ಣನವರು, ದೇವರ ದಾಸಿಮಯ್ಯ, ಶಂಕರ ದಾಸಿಮಯ್ಯ, ಜೇಡರ ದಾಸಿಮಯ್ಯ, ಯುಗದ ಉತ್ಸಾಹ ಬಸವಣ್ಣ ಮೊದಲಾದವು ಅವರು ವಚನ ಸಾಹಿತ್ಯವನ್ನು ಕುರಿತಂತೆ ನಡೆಸಿದ ಗಂಭೀರ ಅಧ್ಯಯನದ ಫಲಕೃತಿಗಳು. ಇವೆಲ್ಲವೂ ವಚನಾಭ್ಯಾಸಿಗಳಿಗೆ ಮಾರ್ಗ ತೋರುವ ಮಹತ್ಕೃತಿಗಳಾಗಿರುವಂತೆ ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ವಚನ ಸಾಹಿತ್ಯದ ಪಾತ್ರವೇನೆಂಬುದನ್ನು ಅಧಿಕೃತವಾಗಿ ದಾಖಲಿಸುವ ಅಪೂರ್ವ ಸಂಶೋಧನಾತ್ಮಕ ಗ್ರಂಥಗಳು.

1931ರ ಮೇ, 10ರಂದು ಶಿವಮೊಗ್ಗ ಜಿಲ್ಲೆಯ ಹಿರೇಕೋಗಲೂರಿನಲ್ಲಿ ಜನಿಸಿದ ಡಾ. ಚಿದಾನಂದಮೂರ್ತಿ ಅವರು ಶಿವಮೊಗ್ಗಾ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಆರಂಭಿಕ ಶಿಕ್ಷಣವನ್ನು ಪೂರೈಸಿ, ಮೈಸೂರು ಮಹಾರಾಜಾ ಕಾಲೇಜಿನಿಂದ 1953ರಲ್ಲಿ ಕನ್ನಡ ಬಿ.ಎ. ಆನರ್ ಪದವಿ ಪಡೆದು ಅಧ್ಯಾಪಕರಾಗಿ ನೇಮಕಗೊಂಡರು. ನಂತರ 1957ರಲ್ಲಿ ಎಂ.ಎ. ಪದವಿಯನ್ನು ಬ್ಯಾಂಕ್‌ನೊಂದಿಗೆ ಗಳಿಸಿದರು. 1967-68ರ ಅವಧಿಯಲ್ಲಿ ಚಿಕ್ಯಾಗೋ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿದ್ದುಕೊಂಡು ಭಾಷಾವಿಜ್ಞಾನದಲ್ಲಿ ಪೋಸ್ಟ್ ಡಾಕ್ಟೋರಲ್ ಅಧ್ಯಯನ ನಡೆಸಿದರು. ಮುಂದೆ ಹಲವು ವರ್ಷ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ದುಡಿದ ಅವರು 1960ರಿಂದ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ, 1968ರಿಂದ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಉಪಪ್ರಾಧ್ಯಾಪಕ, ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿ, 1990ರಲ್ಲಿ ಸ್ವಯಂ ನಿವೃತ್ತಿ ಪಡೆದರು.

ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವಾರು ಸಂಘ-ಸಂಸ್ಥೆಗಳೊಂದಿಗೆ ತಮ್ಮನ್ನು ತೊಡಗಿಸಿಕೊಂಡು ಚಿರಕಾಲ ಉಳಿಯುವಂಥ ಅನೇಕ ಯೋಜನೆಗಳನ್ನು ಮುನ್ನಡೆಸಿದ ಹಾಗೂ ಮಹತ್ವದ ಗ್ರಂಥಯೋಜನೆಗಳನ್ನು ಪೂರೈಸಿದ ನಾಡೋಜ ಡಾ. ಎಂ. ಚಿದಾನಂದಮೂರ್ತಿ ಅವರು ಒಬ್ಬ ಕನ್ನಡದ ಕಟ್ಟಾಳು ಮತ್ತು ಸತ್ಯನಿಷ್ಠ ಹೋರಾಟಗಾರ. ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳಲ್ಲಿನ ಅವರ ಅಧ್ಯಯನ ಮತ್ತು ಸಂಶೋಧನೆಯ ಫಲವಾಗಿ ಅವರಿಂದ ಮೂವತ್ತೈದಕ್ಕೂ ಹೆಚ್ಚಿನ ಸಂಖ್ಯೆಯ ಮೌಲಿಕ ಗ್ರಂಥಗಳು, ಸಾವಿರಾರು ಲೇಖನಗಳು ಪ್ರಕಟವಾಗಿವೆ. ಇದೆಲ್ಲವನ್ನು ಗೌರವಿಸುವಂತೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೊಳಗೊಂಡಂತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಐವತ್ತಕ್ಕೂ ಹೆಚ್ಚಿನ ಪ್ರಶಸ್ತಿಗಳು ಅವರ ಮುಡಿಗೇರಿವೆ.

ವಚನ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕುರಿತಂತೆ ನಾಡೋಜ ಡಾ. ಎಂ. ಚಿದಾನಂದಮೂರ್ತಿ ಅವರು ಜೀವಮಾನವಿಡೀ ನಡೆಸಿದ ಅನನ್ಯ ಅಧ್ಯಯನ ಮತ್ತು ಸಂಶೋಧನೆಯ ಕಾರ್ಯವನ್ನು ಮನ್ನಿಸಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅವರಿಗೆ 2017ನೆಯ ಸಾಲಿನ “ರಮಣಶ್ರೀ ಶರಣ ಜೀವಮಾನದ ಸಾಧನೆಯ ಸನ್ಮಾನ” ನೀಡಿ ಗೌರವಿಸಲು ಹರ್ಷಪಡುತ್ತವೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಹಿರಿಯ ಶ್ರೇಣಿ

ಶರಣ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಲೇಖಕರನ್ನು ಸನ್ಮಾನಿಸಲಾಯಿತು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರ

ಪ್ರೊ. ಎಸ್.ಜಿ. ಸಿದ್ಧರಾಮಯ್ಯ

ನೆಲಮೂಲದ ಸಂಸ್ಕೃತಿಯ ವಿಶಿಷ್ಟ ಅನುಭವಗಳನ್ನು ದೇಸಿ ಮತ್ತು ವಚನ ಲಯಗಳ ಮೂಲಕ ಕಾವ್ಯರೂಪದಲ್ಲಿ ಕಟ್ಟಿಕೊಟ್ಟ ಪ್ರೊ. ಎಸ್. ಜಿ. ಸಿದ್ಧರಾಮಯ್ಯ ಅವರು ಕನ್ನಡದ ಮಹತ್ವದ ಕವಿ. ಅವರು ಒಬ್ಬ ಶ್ರೇಷ್ಠ ವಿಮರ್ಶಕ ಹಾಗೂ ಚಿಂತಕ ಕೂಡ. ಪ್ರೊ. ಸಿದ್ಧರಾಮಯ್ಯ ಅವರ ಒಟ್ಟು ಚಿಂತನೆ ಮತ್ತು ಅಭಿವ್ಯಕ್ತಿಯ ಮೂಲ ನೆಲೆಯಿರುವುದೇ ವಚನಕಾರರ ಅನುಭವ, ಅನುಭಾವ ಮತ್ತು ಅಭಿವ್ಯಕ್ತಿಯ ಆಧಾರದಲ್ಲಿ, ವಚನಗಳ ಆಳವಾದ ಅಧ್ಯಯನ ಮತ್ತು ಅವುಗಳ ಅರ್ಥಮೂಲದ ಶೋಧನೆ ಅವರ ಬರವಣಿಗೆಯನ್ನು ರೂಪಿಸಿದ ಮಹತ್ವದ ಆಶಯಗಳಲ್ಲಿ ಒಂದು.

1946ರ ನವಂಬರ್ 19ರಂದು ತುಮಕೂರು ಜಿಲ್ಲೆಯ ಸಿಂಗಾಪುರದಲ್ಲಿ ಜನಿಸಿದ ಪ್ರೊ. ಎಸ್.ಜಿ.ಸಿದ್ಧರಾಮಯ್ಯ ಅವರು ಪ್ರಾಥಮಿಕ ಶಿಕ್ಷಣವನ್ನು ಸಿಂಗಾಪುರದಲ್ಲಿ ಹಾಗು ಮಾಧ್ಯಮಿಕ ಶಿಕ್ಷಣವನ್ನು ಶ್ರೀರಾಂಪುರದಲ್ಲಿ ಪೂರೈಸಿದರು. ತುಮಕೂರಿನ ಸರಕಾರಿ ಕಾಲೇಜಿನಲ್ಲಿ ಪದವಿ ಅಧ್ಯಯನ ಪೂರೈಸಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ. ಎ. ಆನರ್ ಮತ್ತು ಎಂ.ಎ. ಪದವಿಗಳನ್ನು ಪಡೆದ ಅವರು ಮುಂದೆ ಕನ್ನಡ ಅಧ್ಯಾಪಕರಾಗಿ, ತುಮಕೂರು, ಸಿಂಧನೂರು, ಮಡಿಕೇರಿ ಹಾಗೂ ಕೊರಟಗೆರೆ ಸರಕಾರಿ ಕಾಲೇಜುಗಳಲ್ಲಿ ಕೆಲಸ ಮಾಡಿದರು. ಚಿಕ್ಕನಾಯಕನಹಳ್ಳಿ, ಮಧುಗಿರಿ ಮತ್ತು ತುಮಕೂರಿನ ಸರಕಾರಿ ಕಾಲೇಜುಗಳ ಪ್ರಾಂಶುಪಾಲರಾಗಿಯೂ ದುಡಿದ ಅವರು ತುಮಕೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ಐದು ವರ್ಷ ಪ್ರಾಧ್ಯಾಪಕರಾಗಿ ದುಡಿದಿದ್ದಾರೆ. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿಯೂ ಅವರು ಕೆಲಸ ಮಾಡಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರು ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ.

ಪ್ರೊ, ಎಸ್.ಜಿ. ಸಿದ್ದರಾಮಯ್ಯ ಅವರ ಸೃಜನಶೀಲ ಸಾಹಿತ್ಯಾಭಿವ್ಯಕ್ತಿಯ ಮುಖ್ಯ ಪ್ರಕಾರ ಕಾವ್ಯ. ಗಾಲ್ಫ್ ಉಬ್ಬಿನ ಮೇಲೆ, ಕಾಡುವ ಬೇಲಿ ಹೂ, ಅವಳೆದೆಯ ಜಂಗಮ, ಸೊಲ್ಲು ಫಲವಾಗಿ, ಮರುಜೇವಣಿ, ಕರೆಬಳಗ, ಬೀದಿ ಅಲ್ಲಮ, ಕಾಯ ಮಾಯದ ಹಾಡು, ಉರಿವ ಬತ್ತಿ ತೈಲ, ಅರಿವು ನಾಚಿತ್ತು, ಕಾಲ ಕಣ್ಣಿಯ ಹಂಗು, ಹೊಕ್ಕುಳ ಋತುಗಾನ, ಹಾಡುಗಬ್ಬ-ಇವು ಅವರ ಕವನ ಸಂಕಲನಗಳು, ಸಂಕಲನಗಳ ಈ ಹೆಸರುಗಳೇ ಅವರನ್ನು ಆವರಿಸಿರುವ ವಚನಕಾರರ ಹಾಗೂ ವಚನಗಳ ಪ್ರಭಾವವನ್ನು ಸೂಚಿಸುತ್ತವೆ. ಅಂಬಿಗರ ಚೌಡಯ್ಯ, ಯಡೆಗುಂಟೆ ಸಾಲು, ಕೇಡಿಲ್ಲವಾಗಿ, ಸಾಲಾವಳಿ, ನಿಶಬ್ದದ ಜಾಡು, ಕಣ್ಣಗಾಯದ ಕಾಲುದಾರಿಗಳು, ನೆಲಮೂಲದ ದನಿ, ಬಿಲ್ವ ಬೆಳವಲ, ಕಾಲು ದಾರಿಯ ಸಂತ ಸರ್ವಜ್ಞ ಶರಣೆ ಅಕ್ಕಮ್ಮ-ಇವು ಪ್ರೊ.ಸಿದ್ಧರಾಮಯ್ಯ ಅವರ ವಿಮರ್ಶಾ ಸಂಕಲನಗಳು, ವಚನಗಳನ್ನು ಕುರಿತ ಅಧ್ಯಯನ ಮತ್ತು ಚಿಂತನೆಗಳ ಜೊತೆಗೆ ವರ್ತಮಾನದ ತಲ್ಲಣಗಳೂ ಅವರ ವಿಮರ್ಶೆಯ ಪ್ರಮುಖ ಭಾಗವಾಗಿರುವುದು ವಿಶೇಷ.

ಪ್ರಜಾವಾಣಿ ಪತ್ರಿಕೆಯಲ್ಲಿ ಅವರು ನಿರಂತರವಾಗಿ ಬರೆಯುತ್ತಿರುವ ‘ಅಮೃತವಾಕ್ಕು’ ಅಂಕಣವು ಶರಣರ ವಚನಗಳನ್ನು ಕುರಿತಾದ ಅನನ್ಯ ವಿಶ್ಲೇಷಣೆಯಾಗಿದ್ದು, ಅದು ವಚನಗಳಲ್ಲಿರುವ ಲಿಂಗಾಯತ ತತ್ವಗಳನ್ನು ಪ್ರಜಾಧರ್ಮದ ತಾತ್ವಿಕ ನೆಲೆಯಲ್ಲಿ ಕಟ್ಟಿಕೊಡುತ್ತಿರುವ ವಿಶಿಷ್ಟ ಅಂಕಣವಾಗಿದೆ. ವಚನಾಧ್ಯಯನಕ್ಕೆ ಈ ಅಂಕಣ ಹೊಸ ದಿಕ್ಕನ್ನು ತೆರೆಯುತ್ತಿದೆ.

ಮೂರು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ಪು.ತಿ.ನ. ಕಾವ್ಯ ಪ್ರಶಸ್ತಿ, ಜಿ. ಎಸ್.ಎಸ್. ಕಾವ್ಯ ಪುರಸ್ಕಾರ, ಮಾಸ್ತಿ ಕಾವ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮತ್ತು ಅಮ್ಮ ಪ್ರಶಸ್ತಿಗಳು ಅವರ ಸಾಹಿತ್ಯ ಕೃಷಿಗೆ ಸಂದಿರುವ ಕೆಲವು ಮಹತ್ವದ ಪ್ರಶಸ್ತಿಗಳು,

ವಚನ ಸಾಹಿತ್ಯಾಧ್ಯಯನ ಮತ್ತು ವಚನ ವಿಮರ್ಶಾ ಕ್ಷೇತ್ರಕ್ಕೆ ಪ್ರೊ. ಎಸ್. ಜಿ. ಸಿದ್ಧರಾಮಯ್ಯ ಅವರು ಸಲ್ಲಿಸಿದ ಮಹತ್ವದ ಕೊಡುಗೆಗಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅವರಿಗೆ 2017ನೆಯ ಸಾಲಿನ “ರಮಣಶ್ರೀ ಶರಣ ಪ್ರಶಸ್ತಿ”ಯನ್ನು ನೀಡಿ ಗೌರವಿಸಲು ಹರ್ಷಪಡುತ್ತವೆ.

ಆಧುನಿಕ ವಚನ ರಚನೆ

ಶ್ರೀ ಲಾಲ್ ಮಹ್ಮದ ಬಂದೇನವಾಜ ಐಫ್ ಅಲ್ದಾಳ

ಅಲ್ಲಮ ಮತ್ತು ಅಲ್ಲಾ ಇಬ್ಬರನ್ನೂ ಏಕಕಾಲಕ್ಕೆ ನೆನಪಿಗೆ ತಂದುಕೊಡುವಂಥ ವ್ಯಕ್ತಿತ್ವದ ಶ್ರೀ ಲಾಲ್ ಮಹ್ಮದ ಬಂದೇನವಾಜ ಖಲೀಫ್ ಅಲ್ಟಾಳ ಅವರು ಕನ್ನಡ ನಾಡಲ್ಲ ಹೆಮ್ಮೆ ಪಡುವಂಥ ರಂಗಚೇತನ, ವರ್ತಮಾನದಲ್ಲಿ ವೃತ್ತಿರಂಗಭೂಮಿಯನ್ನು ಜೀವಂತವಿಟ್ಟ ಕ್ರಿಯಾಶೀಲ ವ್ಯಕ್ತಿಗಳಲ್ಲಿ ಅವರದು ಎದ್ದುಕಾಣುವ ಹೆಸರು. ವಚನಕಾರರ ಬದುಕು- ವ್ಯಕ್ತಿತ್ವಗಳನ್ನಾಧರಿಸಿದ ಚಾರಿತ್ರಿಕ ಕೃತಿಗಳು, ಪುರಾಣಗಳು, ನಾಟಕಗಳು, ತತ್ವಗೀತೆಗಳು ನಾಮಾವಳಿಗಳನ್ನೊಳಗೊಂಡಂತೆ ಇತರೇ ವಿಷಯಗಳನ್ನು ಕುರಿತು ನೂರಕ್ಕೂ ಹೆಚ್ಚು ಸಾಹಿತ್ಯ ಕೃತಿಗಳ ರಚನೆ ಮಾಡಿರುವ ಅವರ ಕ್ರಿಯಾಶೀಲತೆ ಬೆರಗುಗೊಳಿಸುವಂಥದ್ದು,

1938ರ ನವಂಬರ್ ಐದರಂದು, ವಿಜಯಪುರ ಜಿಲ್ಲೆಯ ಬನ್ನಿಹಟ್ಟಿಯಲ್ಲಿ ಜನಿಸಿದ ಶ್ರೀ ಎಲ್.ಬಿ.ಕೆ. ಅಡ್ವಾಳ ಅವರು ಓದಿದ್ದು ಕೇವಲ ಏಳನೆಯ ತರಗತಿಯವರೆಗೆ ಮಾತ್ರ ಮಾಡಿದ್ದು ಹತ್ತಾರು ಸಂಘ-ಸಂಸ್ಥೆಗಳಿಂದಾಗುವ ಕೆಲಸವನ್ನು ಬಾಲ್ಯದಿಂದಲೂ ರಂಗ ಚಟುವಟಿಕೆಯಲ್ಲಿ ತೊಡಗಿದ ಅವರು ಮುಂದೆ ರಂಗನಾಟಕಗಳ ರಚನೆ, ನಿರ್ದೇಶನದಲ್ಲಿ ಮುಳುಗಿ ‘ರಂಗ ಜಂಗಮ’ನಾಗಿ ಊರೂರು ಅಲೆದು ನಾಟಕ ಸಂಸ್ಕೃತಿಯನ್ನು ಬಿತ್ತಿಬೆಳೆದರು. ಆ ಮೂಲಕ ಶರಣರಾದಿಯಾಗಿ ಹಲವಾರು ಪುಣ್ಯಪುರುಷರ ತತ್ವಚಿಂತನೆಗಳನ್ನು ಎಲ್ಲೆಡೆ ಹರವಿದರು. ಸಾಮಾಜಿಕ ನಾಟಕಗಳನ್ನೂ ಆಡಿದರು, ಆಡಿಸಿದರು.

20 ನಾಟಕಗಳು, 2 ವಚನ ಗ್ರಂಥಗಳು, 4 ಜನಪದ ಕೃತಿಗಳು, ಕಾಶಿ ಪ್ರವಾಸ ಕುರಿತ ಒಂದು ಪ್ರವಾಸ ಕಥನ, 16 ಚರಿತ್ರೆಯ ಕೃತಿಗಳು, 3 ತತ್ವಗೀತೆಗಳ ಸಂಕಲನಗಳು, 4 ನಾಮಾವಳಿ ಗ್ರಂಥಗಳು, 2 ಪುರಾಣ ಕೃತಿಗಳು, 9 ಭಕ್ತಿ ಧ್ವನಿಸುರುಳಿಗಳು-ಇಷ್ಟನ್ನೆಲ್ಲ ಹೊರತಂದ ಶ್ರೀ ಅಲ್ದಾಳ ಅವರ ಸೃಜನಶೀಲ ಭಂಡಾರದಲ್ಲಿ ಇನ್ನೂ 18 ಅಪ್ರಕಟಿತ ನಾಟಕಗಳಿವೆ, 6 ಅಪ್ರಕಟಿತ ಪುರಾಣ ಗ್ರಂಥಗಳಿವೆ. ಅಚ್ಚರಿ ತರುವ ಸಾಧನೆಯಿದು.

ಶ್ರೀ ಎಲ್.ಬಿ.ಕೆ. ಆಲ್ದಾಳ ಅವರ ಬಹುಮುಖ್ಯ ಸಾಧನೆಯಿರುವುದು ಅವರ ಆಧುನಿಕ ವಚನಗಳ ರಚನೆಯಲ್ಲಿ ಅನುಭವದ ಜೊತೆಗೆ ವರ್ತಮಾನದ ವಿದ್ಯಮಾನಗಳನ್ನೂ ವಸ್ತುವಾಗಿಟ್ಟುಕೊಂಡು ಅವರು ರಚಿಸಿರುವ 1127 ಆಧುನಿಕ ವಚನಗಳು ‘ವಚನ ವಾಹಿನಿ’ ಎಂಬ ಕೃತಿಯಾಗಿ ಮೂಡಿಬಂದಿದೆ. ‘ತಪೋವನ ಮಠಾಧೀಶ’ ಎಂಬ ಅಂಕಿತನಾಮದಲ್ಲಿ ರಚಿತವಾದ ಅವರ ವಚನಗಳು ಹನ್ನೆರಡನೆಯ ಶತಮಾನದ ಶರಣರ ವಚನಗಳನ್ನು ನೆನಪಿಗೆ ತರುವಂತಿವೆ.

ಕರುವಿಂಗೆ ಉಪವಾಸ ಕೆಡುಹಿ, ಗೋಕ್ಷೀರವ ತಾರೆನಯ್ಯಾ !
ಪರಿಮಳವನುಂಡು ಕಟ್ಟಿದ ಹುಟ್ಟಿಗೆ ಜೇನ್ನೊಣವ ಹಾರಿಸಿ ಮಧುವ ತಾರೆನಯ್ಯಾ!
ಸೌಗಂಧ ಸೇವಿಸುವ ಶೃಂಗಕ್ಕೆ ವಂಚಿಸಿ ಹೂವು ತಾರೆನಯ್ಯಾ!
ಅವೆಲ್ಲ ಹುಸಿ ಡಂಬಕಗಳೆನಿಸಿ, ಎನ್ನ ಕಾಯವನೆ ತಂದಿಹೆನು ಸ್ವೀಕರಿಸಯ್ಯ ತಪೋವನ ಮಠಾಧೀಶ.

– ಇದು ಅವರ ವಚನಗಳ ಒಂದು ಮಾದರಿ, ಭಕ್ತಿ, ಆದರ್ಶ, ಸಮನ್ವಯ, ಸಾಮಾಜಿಕ ನೀತಿ, ರಾಷ್ಟ್ರೀಯ ಸಮತೆ-ಹೀಗೆ ಹಲವು ಹತ್ತು ವಿಷಯಗಳನ್ನೊಳಗೊಂಡ ಅವರ ಆಧುನಿಕ ವಚನಗಳು ಬೆರಗು ತರುವಷ್ಟು ವೈವಿಧ್ಯಮಯವಾಗಿವೆ.

ಕರ್ನಾಟಕ ರಾಜ್ಯದ ಪುರಸ್ಕಾರ, ಸಿ.ಜಿ.ಕೆ. ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ಡಾ. ಗುಬ್ಬಿ ವೀರಣ್ಣ ಪ್ರಶಸ್ತಿಯನ್ನೂ ಒಳಗೊಂಡ ಹಾಗೆ ಅನೇಕ ಪ್ರಶಸ್ತಿಗಳು ಅವರ ಮುಡಿಗೇರಿದ್ದು, ಈಗ ಅವರ ಆಧುನಿಕ ವಚನ ರಚನೆಗಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅವರಿಗೆ 2017ನೆಯ ಸಾಲಿನ “ರಮಣಶ್ರೀ ಶರಣ ಪ್ರಶಸ್ತಿ”ಯನ್ನು ನೀಡಿ ಗೌರವಿಸಲು ಸಂತೋಷಪಡುತ್ತಿವೆ.

ವಚನ ಸಂಗೀತ ಕ್ಷೇತ್ರ

ಡಾ. ಮೃತ್ಯುಂಜಯ ಶೆಟ್ಟರ

ಕೆ.ಎಲ್.ಇ. ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಪ್ರೊಶಿ.ಶಿ. ಬಸವನಾಳ ಅವರ ಮೊಮ್ಮಗ ಪಂ. ಡಾ. ಮೃತ್ಯುಂಜಯ ಶೆಟ್ಟರ ಈ ನಾಡು ಕಂಡ ಅಪ್ರತಿಮ, ಪ್ರತಿಭಾವಂತ ಹಾಗೂ ಸುಮಧುರ ಕಂಠದ ಗಾಯಕ. 1964 ಎಪ್ರಿಲ್ 21ರಂದು ಧಾರವಾಡದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಮ್ಯೂಜಿಕ ಮತ್ತು ಎಂ. ಮ್ಯೂಜಿಕ್ ಪರೀಕ್ಷೆಗಳನ್ನು ಪ್ರಥಮ ಬ್ಯಾಂಕ್ ಹಾಗೂ ಚಿನ್ನದ ಪದಕಗಳೊಂದಿಗೆ ಪಾಸಾಗಿದ್ದಾರೆ. ‘ತುಮರಿ ಗಾಯನದ ಸೌಂದರ್ಯ ಸಮೀಕ್ಷೆ’ ಎಂಬ ವಿಷಯ ಕುರಿತ ಇವರ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ
ಪಿಎಚ್.ಡಿ. ದೊರೆತಿದೆ.

ಪಂ.ಮಲ್ಲಿಕಾರ್ಜುನ ಮನಸೂರ, ಪಂ.ಬಸವರಾಜ ರಾಜಗುರು, ಪಂ.ಸಂಗಮೇಶ್ವರ ಗುರವ, ಪಂ. ಪ್ರಭುದೇವ ಸರದಾರ ಮೊದಲಾದವರ ಶಿಷ್ಯತ್ವದಲ್ಲಿ ಪಾರಂಪರಿಕ ಸಂಗೀತ ಶಿಕ್ಷಣ ಪಡೆದಿರುವ ಪಂ.ಮೃತ್ಯುಂಜಯ ಶೆಟ್ಟರ ಅವರು ಕಳೆದ 45 ವರ್ಷಗಳಿಂದ ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಸುತ್ತಿ ಜಯಪುರ, ಗ್ವಾಲೀಯರ ಹಾಗೂ ಕಿರಾಣಾ ಘರಾಣಾಗಳಲ್ಲಿ ಸಂಗೀತದ ಮೂವತ್ತು ಪ್ರಕಾರಗಳನ್ನು ಪ್ರಚುರಪಡಿಸುತ್ತ ಬಂದಿದ್ದಾರೆ. ಹಿಂದುಸ್ತಾನಿ ಶಾಸ್ತ್ರೀಯ ಗಾಯನ, ಉಪಶಾಸ್ತ್ರೀಯ ಗಾಯನ, ಭಜನ್, ಭಾವಗೀತೆ, ಠುಮ್ಮಿ, ದಾಸರ ಪದಗಳು, ತತ್ವಪದಗಳು, ನಾಟ್ಯಸಂಗೀತ ಹಾಗೂ ಬಹಳ ಮುಖ್ಯವಾಗಿ ಬಸವಾದಿ ಶರಣರ ವಚನಗಳ ಸುಧೆಯನ್ನು ಎಲ್ಲೆಡೆ ಹರಿಸಿರುವ ಹಾಗೂ ಹರಿಸುತ್ತಿರುವ ಪಂ. ಶೆಟ್ಟರ ಅವರು ಸಂಗೀತ ಕ್ಷೇತ್ರದ ಅನೇಕ ಸಂಘ- ಸಂಸ್ಥೆಗಳ ಸದಸ್ಯತ್ವ ಹೊಂದಿ ಆ ಕಲೆಯನ್ನು ಎಲ್ಲೆಡೆ ಪಸರಿಸುತ್ತಿದ್ದಾರೆ.

ನವದೆಹಲಿಯ ಸಂಗೀತ ನಾಟಕ ಅಕಾಡೆಮಿಯಿಂದ ಸಂಗೀತ ಕುರಿತು ಐದು ಸಾಕ್ಷಚಿತ್ರಗಳನ್ನು ನಿರ್ಮಿಸಿದ್ದು, ತಾನಸೇನ ನಾಟಕದಲ್ಲಿ ಪಾತ್ರವಹಿಸಿದ್ದು, “ಅಂಜಿ” ನಾಟಕಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ‘ಸ್ವರಸಂಚಾರಿ’, ‘ವಚನ ವಿಹಾರಿ’, ‘ದಾಸದಾರಿ’ ಎಂಬ ವಿನೂತನ ಕಾರ್ಯಕ್ರಮಗಳ ಮೂಲಕ ಸಂಗೀತದ ಬೇರೆ ಬೇರೆ ಪ್ರಕಾರಗಳನ್ನು ಜನತೆಗೆ ತಲುಪಿಸಿದ್ದು ಇವರ ಮಹತ್ವದ ಕೊಡುಗೆಗಳಲ್ಲಿ ಕೆಲವು.

ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವಾರು ಉನ್ನತ ಪ್ರಶಸ್ತಿಗಳಿಗೆ ಭಾಜನರಾಗಿರುವ ಪಂ. ಮೃತ್ಯುಂಜಯ ಶೆಟ್ಟರ ಅವರಿಗೆ ‘ಅಭಿನವ ಮಲ್ಲಿಕಾರ್ಜುನ ಮನಸೂರ’, ‘ಗಾನ ಗಂಧರ್ವ’, ‘ಗಾನರತ್ನ’, ‘ಸಂಗೀತ ರತ್ನಾಕರ’ ಮೊದಲಾದ ಅಭಿಧಾನಗಳು ಪ್ರಾಪ್ತವಾಗಿವೆ. ಮೇರಿಲ್ಯಾಂಡ್, ಬೋಸ್ಟನ್, ವಾಷಿಂಗಟನ್, ಡಲ್ಲಾಸ್, ಕೆನಡಾ, ಟೊರಾಂಟೊ, ಅಟ್ಲಾಂಟಾ, ಸ್ಯಾನ್‌ಫ್ರಾನ್ಸಿಸ್ಕೊ, ಫಿಟ್ಸಬರ್ಗ, ನ್ಯೂಯಾರ್ಕ, ನ್ಯೂಜರ್ಸಿ, ವರ್ಜೀನಿಯಾ ಮತ್ತು ಇನ್ನೂ ಹಲವಾರು ದೇಶಗಳಲ್ಲಿ ಏರ್ಪಾಡಾದ ಇವರ ಸಂಗೀತ ಕಛೇರಿಗಳಿಗೆ ಮನಸೋತ ವಿದೇಶಿಯರು ವಿವಿಧ ಬಿರುದುಗಳನ್ನು ನೀಡಿ ಅವರನ್ನು ಗೌರವಿಸಿದ್ದಾರೆ. ಸಂಗೀತ ಕ್ಷೇತ್ರದ ಈ ಅನನ್ಯ ಸಾಧನೆಗಾಗಿ ಅವರಿಗೆ ಹಲವಾರು ಪ್ರಶಸ್ತಿ ಮತ್ತು ಬಹುಮಾನಗಳು ಸಂದಿವೆ.

ಶಿಕ್ಷಕರಾಗಿ ಅಸಂಖ್ಯ ವಿದ್ಯಾರ್ಥಿಗಳಿಗೆ ಸಂಗೀತದ ಧಾರೆಯೆರೆದಿರುವ ಪಂ. ಶೆಟ್ಟರ ಅವರು ಗದುಗಿನ ಪಂ. ಪುಟ್ಟರಾಜ ಗವಾಯಿಗಳು ಸ್ಥಾಪಿಸಿದ ಪಂ. ಪಂಚಾಕ್ಷರಿ ಗವಾಯಿಗಳ ಸಂಗೀತ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಧ್ಯಯನ, ಅಧ್ಯಾಪನ ಮತ್ತು ನಿತ್ಯಸಾಧನೆ-ಇವೆಲ್ಲವುಗಳ ಮೂಲಕ ಸಂಗೀತ ಪರಂಪರೆಯನ್ನು ನಿರಂತರ ಮುಂದುವರೆಸುತ್ತಿರುವ ಅವರು ನಾಡಿನ ಮಹತ್ವದ ಕಲಾರಾಧಕರಾಗಿದ್ದಾರೆ.

ತಮ್ಮ ಎಲ್ಲ ಸಂಗೀತ ಕಛೇರಿಗಳಲ್ಲಿ ವಚನಗಳನ್ನು ಪ್ರಸ್ತುತಪಡಿಸುವ ಇವರು ಆ ಮೂಲಕ ಶರಣರ ವೈಚಾರಿಕ ತತ್ವಗಳನ್ನು ಹರಡುತ್ತಿರುವುದು ವಿಶೇಷ. ವಚನಸಂಗೀತಕ್ಕೆ ಈ ರೀತಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವ ಪಂ.ಮೃತ್ಯುಂಜಯ ಶೆಟ್ಟರ ಅವರ ಸಾಧನೆಯನ್ನು ಗಮನಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅವರಿಗೆ 2017ನೆಯ ಸಾಲಿನ “ರಮಣಶ್ರೀ ಶರಣ ಪ್ರಶಸ್ತಿ”ಯನ್ನು ನೀಡಿ ಅತ್ಯಂತ ಸಂತೋಷದಿಂದ ಗೌರವಿಸುತ್ತಿವೆ.

ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ

ವೀರಶೈವ ಸಮಾಜ ಆಫ್ ನಾರ್ಥ ಅಮೇರಿಕಾ (ವಿ.ಎಸ್.ಎನ್.ಎ.) ಅಧ್ಯಕ್ಷರು: ಶ್ರೀಮತಿ ಲಕ್ಷ್ಮೀ ಹಿರೇಮಠ

ಉದ್ದಿಮೆ, ಉದ್ಯೋಗ, ಆದಾಯ, ಐಷಾರಾಮಿ ಬದುಕು-ಇಷ್ಟನ್ನೇ ಧ್ಯಾನಿಸುವ ಬೃಹತ್ ಬಹುನಾಗರಿಕ ದೇಶ ಅಮೇರಿಕಾ, ಅಂಥಲ್ಲಿಯೂ ಕರ್ನಾಟಕದ ಶರಣರು ಸಾರಿದ ಮತ್ತು ಆಚರಿಸಿದ ಸಮಾನತೆ, ಸಹಬಂಧುತ್ವ, ಕಾಯಕ ಮತ್ತು ದಾಸೋಹದಂಥ ವಿಶ್ವತತ್ವಗಳನ್ನು ತಮ್ಮ ಜೀವನ ಕ್ರಮವನ್ನಾಗಿ ಮಾಡಿಕೊಳ್ಳುವ ಉದ್ದೇಶದಿಂದ ಉತ್ತರ ಅಮೇರಿಕಾದಲ್ಲಿ ವಾಸವಾಗಿರುವ ಕನ್ನಡಿಗರು ಸ್ಥಾಪಿಸಿಕೊಂಡ ಸಾರ್ವಜನಿಕ ಸೇವಾ ಸಂಸ್ಥೆ ವಿ.ಎಸ್.ಎನ್.ಎ., ಅಂದರೆ ವೀರಶೈವ ಸಮಾಜ ಆಫ್ ನಾರ್ಥ ಅಮೇರಿಕಾ, ಕ್ಯಾಲಿಫೋರ್ನಿಯಾದಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಈ ಸಂಸ್ಥೆಯು ಉತ್ತರ ಅಮೇರಿಕಾ ಮತ್ತು ಕೆನಡಾಗಳಲ್ಲಿ ಒಟ್ಟು ಇಪ್ಪತ್ತೊಂದು(21) ಶಾಖೆಗಳನ್ನು ಹೊಂದಿದೆ. “VSNA is known for its excellent work in promoting Sharana philosophy and spreading the universal principles of Basavanna’s doctrines across USA” ಎಂದು ತಮ್ಮ ಸಂಸ್ಥೆಯ ಗೊತ್ತು ಗುರಿಗಳ ಬಗ್ಗೆ ಹೇಳುವ ಶ್ರೀಮತಿ ಲಕ್ಷ್ಮಿ ಹಿರೇಮಠ ಅವರು ಇದರ ಅಧ್ಯಕ್ಷರಾಗಿದ್ದು ತುಂಬ ಉತ್ಸಾಹದಿಂದ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

2011ರ ನವಂಬರ್ 18ರಂದು ನಿರ್ದೇಶಕರ ಮಂಡಳಿಯೊಂದನ್ನು ಸ್ಥಾಪಿಸಿಕೊಂಡ ವಿ.ಎಸ್.ಎನ್.ಎ. ಸಂಸ್ಥೆ ಅದು ಒದಗಿಸಿದ ಯೋಜನಾ ವಿವರಗಳನ್ನು 2012ರ ನವಂಬರ್ 3ರಂದು ಅಳವಡಿಸಿಕೊಂಡು ಕಾರ್ಯಾರಂಭಮಾಡಿತು. ಅಮೇರಿಕದಂಥ ದೇಶಕ್ಕೆ ವಲಸೆಗಾರರಾಗಿ ಬಂದಿರುವ ಸಮಾಜಬಾಂಧವರೆಲ್ಲರೂ ಶರಣರ ಅನನ್ಯ ವೈಚಾರಿಕ ತಾತ್ವಿಕತೆಯನ್ನು ಅಳವಡಿಸಿಕೊಳ್ಳುವುದು, ಪ್ರಾಮಾಣಿಕ ಕಾಯಕ ಮಾಡುವುದು ಮತ್ತು ದಾಸೋಹವನ್ನು ನಡೆಸುವುದು ತಮ್ಮ ಮುಖ್ಯ ಉದ್ದೇಶವೆಂದು ಸಂಸ್ಥೆ ಆರಂಭದಲ್ಲಿ
ನಿರೂಪಿಸಿಕೊಂಡಿತು.

ಕರ್ನಾಟಕದ ಸಂಸ್ಕೃತಿಯಿಂದ ದೂರವಿದ್ದು ಬೆಳೆಯುವ ಯುವಸಮೂಹಕ್ಕೆ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಕಲಿಸುವುದು. ಶರಣರ ತತ್ವಗಳನ್ನು ಅವರಿಗೆ ತಿಳಿಸಿಕೊಡುವುದು, ಜಾತಿಭೇದ, ಲಿಂಗಭೇದಗಳನ್ನು ದೂರವಿಟ್ಟು ಸಮಾನ ನೆಲೆಯಲ್ಲಿ ಬದುಕುವ ರೀತಿಯನ್ನು ಹೇಳಿಕೊಡುವುದು, ಅಗತ್ಯವಿರುವವರಿಗೆ ಸಹಾಯಹಸ್ತ ಚಾಚುವುದು, ವಚನಗಳನ್ನು ಓದಿ ಅರ್ಥಮಾಡಿಸುವುದು. ಷಟ್‌ ಸ್ಥಲ, ಅಷ್ಟಾವರಣ, ಪಂಚಾಚಾರಗಳನ್ನು ಅಳವಡಿಸಿಕೊಳ್ಳುವುದು, ಶಿವಯೋಗ ಸಾಧನೆ, ಅದೈತ ತತ್ವಜ್ಞಾನದ ಆಚರಣೆ-ಇವೆಲ್ಲವೂ ವಿ.ಎಸ್.ಎನ್.ಎ. ತನ್ನ ಮುಂದಿಟ್ಟುಕೊಂಡಿರುವ ಆದ್ಯ ಕಾರ್ಯಗಳು.

ವಚನಗಳನ್ನು ಕುರಿತು ಚರ್ಚೆ, ವಚನಗಾಯನ, ಲಿಂಗಪೂಜೆ, ಪರಿಣತರಿಂದ ಉಪನ್ಯಾಸಗಳನ್ನು ನಡೆಸುವುದು, ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದು, ವಚನಗಳ ಪುಸ್ತಕ, ಸಿ.ಡಿ.ಗಳನ್ನು ಪೂರೈಸುವುದು, ನಾಮಕರಣ, ಲಿಂಗಧಾರಣ, ಮದುವೆ- ಮೊದಲಾದ ಸಂದರ್ಭಗಳನ್ನು ಎಲ್ಲರೂ ಸೇರಿ ಆಚರಿಸುವುದು ಮತ್ತು ಲಿಂಗೈಕ್ಯರಾದ ಸಮಯದಲ್ಲಿ ನೆರವು ನೀಡುವುದು ಇವುಗಳನ್ನೆಲ್ಲ ವಿ.ಎಸ್‌.ಎನ್.ಎ. ಸಂಸ್ಥೆಯು ನಿರಂತರ ನಡೆಸುತ್ತ ಬರುತ್ತಿದೆ. ಸಂಘಟನೆಯು ತನ್ನ ಯುವ ಮತ್ತು ಮಹಿಳಾ ವಿಭಾಗಗಳನ್ನೂ ಹೊಂದಿದ್ದು ಅವು ಕೂಡ ಯುವಕರ ಮತ್ತು ಮಹಿಳೆಯರ ಯೋಗಕ್ಷೇಮಕ್ಕೆ ಅಗತ್ಯವಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ಚಟುವಟಿಕೆಗಳನ್ನು ನಿರಂತರ ನಡೆಸುತ್ತಿವೆ. ಸಂಸ್ಥೆಯು ವಾರ್ಷಿಕ ಸಭೆಗಳನ್ನು ಆಯೋಜಿಸುವ ಮೂಲಕ ತನ್ನ ಎಲ್ಲ ಶಾಖೆಗಳ ಸದಸ್ಯರನ್ನು ಆಹ್ವಾನಿಸಿ ವರ್ಷದ ಕಾರ್ಯಯೋಜನೆಯನ್ನು ರೂಪಿಸಿಕೊಂಡು ನಿಗದಿತ ರೀತಿಯಲ್ಲಿ ಕೆಲಸ ಮಾಡುತ್ತಿದೆ.

ಹೀಗೆ ಅಮೇರಿಕದಲ್ಲೂ ಶರಣರ ಬದುಕು, ಚಿಂತನೆ ಮತ್ತು ವೈಚಾರಿಕ ತತ್ವಗಳು ಸದಾ ಜಾಗೃತವಾಗಿರುವಂತೆ ಮತ್ತು ಆಚರಣೆಯಲ್ಲಿರುವಂತೆ ನಿರಂತರ ಶ್ರಮಿಸುತ್ತಿರುವ ವಿ.ಎಸ್.ಎನ್.ಎ. ಸಂಸ್ಥೆಯ ಮಹತ್ವದ ಕೆಲಸವನ್ನು ಗಮನಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಈ ಸಂಸ್ಥೆಗೆ 2017ನೆಯ ಸಾಲಿನ “ರಮಣಶ್ರೀ ಶರಣ ಪ್ರಶಸ್ತಿ”ಯನ್ನು ನೀಡಿ ಅತ್ಯಂತ ಸಂತೋಷದಿಂದ ಗೌರವಿಸುತ್ತಿವೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಉತ್ತೇಜನ ಪ್ರಶಸ್ತಿ

ಶರಣ  ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮಾರ್ಗವನ್ನು ತೋರಿದ ಮತ್ತು ಇತರರಿಗೆ ಪ್ರೇರೇಪಿಸುವ ವ್ಯಕ್ತಿಗಳನ್ನು ಗೌರವಿಸಲಾಯಿತು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರ

ಪ್ರೊ. ಚಂದ್ರಶೇಖರ ವಸ್ತ್ರದ

ಕಳೆದ ಮೂವತ್ತು ವರ್ಷಗಳಿಂದ ಕನ್ನಡ ಉಪನ್ಯಾಸಕರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಸರಕಾರಿ ಉದ್ಯೋಗದಿಂದ ನಿವೃತ್ತರಾದ ಪ್ರೊ.ಚಂದ್ರಶೇಖರ ವಸ್ತ್ರದ ಅವರು ಹುಟ್ಟಿದ್ದು ಸಿಂಧಗಿಯಲ್ಲಾದರೆ, ನೆಲೆನಿಂತದ್ದು ಗದುಗಿನಲ್ಲಿ ಕನ್ನಡದಲ್ಲಿ ಅವರು ಎಂ. ಎ. ಪದವೀಧರರು.
ಸಾಹಿತ್ಯಕೃಷಿ, ಸಂಘಟನೆ, ರಂಗ ಚಟುವಟಿಕೆ, ಚಲನಚಿತ್ರ -ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಒಂದು ಪ್ರಕಾಶನ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ.
ಮಾನವತಾವಾದಿ ಬಸವಣ್ಣ (ಇದು ಇಂಗ್ಲೀಷ್ ಹಾಗೂ ಮರಾಠಿಗೂ ಅನುವಾದವಾಗಿದೆ), ಕುಲಕ್ಕೆ ತಿಲಕ ಮಾದಾರ ಚೆನ್ನಯ್ಯ, ಪಂಚಾಕ್ಷರಿ ಗವಾಯಿಗಳು, ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು, ಕನ್ನಡ ಜಗದ್ಗುರು, ಬೆಳಗು (ಚಿಂತನ), ನುಲಿಯ ಚಂದಯ್ಯ (ಪ್ರಸಂಗ), ಶಿವನಾಗಮಯ್ಯ (ನಾಟಕ), ಎಚ್.ಎನ್.ಹೂಗಾರ, ಎಂ.ಎಸ್. ಸರದಾರ, ಹರಿದಾವ ನೆನಪ…(ಲಲಿತ ಪ್ರಬಂಧ)-ಇತ್ಯಾದಿ ಶ್ರೀ ವಸ್ತ್ರದ ಅವರ ಸ್ವತಂತ್ರ ಕೃತಿಗಳು. ಸಂಪಾದಿತ ಕೃತಿಗಳಲ್ಲಿ ಪ್ರಮುಖವಾದವುಗಳೆಂದರೆ, ನಿರ್ವಚನ, ವಚನ ಕಲ್ಯಾಣ, ಸಾಮಾನ್ಯರ ಸ್ವಾಮೀಜಿ, ಎಸ್‌,ಜಿ, ಸ್ವಾಮಿ ಸಮಗ್ರ ಕಾವ್ಯ, ಬಸವತತ್ವರತ್ನಾಕರ, ಬಾಲಲೀಲಾ ಮಹಾಂತ ಶಿವಯೋಗಿ ಪುರಾಣ, ಸ್ವರಗುರು ಮೊದಲಾದವುಗಳು. ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಪಟ್ಟಾಧಿಕಾರದ ರಜತೋತ್ಸವ ಸಂದರ್ಭದಲ್ಲಿ ಪ್ರಕಟವಾದ 25 ಶರಣ ಸಾಹಿತ್ಯ ಕೃತಿಗಳ ಸಂಪಾದನಾ ಕೆಲಸವನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಸಂಸ್ಥಾಪಕ ಸದಸ್ಯ ಕಾರ್ಯದರ್ಶಿಯಾಗಿ, ಗದುಗಿನ ಕಲಾಚೇತನ ಅಕಾಡೆಮಿಯ

ನಿರ್ದೇಶಕರಾಗಿ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಗದಗ ಜಿಲ್ಲಾ ಗ್ರಾಮಚರಿತ್ರೆ ಕೋಶದ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಧ್ಯ ಡಾ. ಬೆಟಗೇರಿ ಕೃಷ್ಣಶರ್ಮ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಸದಸ್ಯರಾಗಿ ಹಾಗೂ ಗದುಗಿನ ಜಗದ್ಗುರು ತೋಂಟದಾರ್ಯ ಮಠದ ಡಾ.ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.
ಪ್ರೊ. ಚಂದ್ರಶೇಖರ ವಸ್ತ್ರದ ಅವರು ವಚನ ಸಾಹಿತ್ಯ ಕ್ಷೇತ್ರದಲ್ಲಿ ಕೈಕೊಂಡ ಅಧ್ಯಯನ ಮತ್ತು ಸಂಶೋಧನೆಯ ಕಾರ್ಯಕ್ಕೆ ಮನ್ನಣೆಯಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅವರಿಗೆ ಅತ್ಯಂತ ಸಂತೋಷದಿಂದ 2017ನೆಯ ಸಾಲಿನ “ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿವೆ.

ಆಧುನಿಕ ವಚನ ರಚನೆ

ಶ್ರೀಮತಿ ಜಿ.ವಿ.ರೇಣುಕಾ

ಕನ್ನಡ  ಲೇಖಕಿ,ಅನುವಾದಕಿ, ಕವಯತ್ರಿ, ವಚನಕಾರ್ತಿ ಹಾಗೂ  ಪ್ರವಚನಕಾರ್ತಿಯಾಗಿರುವ ಶ್ರೀಮತಿ ಜಿ. ವಿ. ರೇಣುಕಾ ಅವರು ವಚನ, ಪ್ರಬಂಧ, ಕವನ, ನಾಟಕ, ಚುಟುಕ, ಗದ್ಯಾನುವಾದ ಮುಂತಾದ ಪ್ರಕಾರಗಳಲ್ಲಿ ಒಟ್ಟು ಈವರೆಗೆ 16 ಕೃತಿಗಳನ್ನು ಪ್ರಕಟಿಸಿದ್ದಾರೆ. ಕಾವ್ಯವಾಚನ, ಭಾಷಣ, ನಿರೂಪಣೆ, ಧಜನೆ, ಸಂವಾದ, ಸಮಾಜ ಸೇವೆ, ಸಂಗೀತ ಶಿಕ್ಷಣ, ಆಪ್ತಸಲಹೆ-ಹೀಗೆ ಹಲವು ಹತ್ತು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಶಾಲೆಯಲ್ಲಿ ಎಂಟನೆಯ ತರಗತಿಯವರೆಗೆ ಮಾತ್ರ ಓದಿದ್ದರೂ, ಖಾಸಗಿಯಾಗಿ ಎಸ್.ಎಸ್.ಎಲ್.ಸಿ. ಹಾಗೂ ಹಿಂದಿ ಪದವಿ ಪಡೆದ ಅವರು ಮದುವೆಯಾಗಿ ಮೂರು ಮಕ್ಕಳಾದ ಮೇಲೆ ಬಿ.ಎ. ಪದವಿ ಪಡೆದರು. ದೇಶ-ವಿದೇಶಗಳಲ್ಲಿ ಹಲವಾರು ವಿಚಾರ ಸಂಕಿರಣ, ಕವಿಗೋಷ್ಠಿ ಹಾಗೂ ವಚನಗೋಷ್ಠಿಗಳಲ್ಲಿ ಭಾಗವಹಿಸಿದ ಕೀರ್ತಿ ಅವರದು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳ ಹಲವಾರು ಸಂಘ-ಸಂಸ್ಥೆಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಜಿ.ಪಿ. ರೇಣುಕಾ ಅವರು ಆ ಸಂಸ್ಥೆಗಳು ಏರ್ಪಡಿಸುವ ಅಸಂಖ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ನೀಲಗಂಗಾ ಮಹಿಳಾ ಬಳಗ”, “ಸುರುಚಿ ಕಲಾವಿದರು”, “ಶರಣ ಸಂಗಮ” ದಂಥ ಅನನ್ಯ ಸಾಂಸ್ಥಿಕ ಸಂಘಟನೆಗಳ ಮೂಲಕ ವಿನೂತನ ಕಾರ್ಯಕ್ರಮವನ್ನು ರೂಪಿಸಿರುವ ಅವರು ಬಹಳ ಮುಖ್ಯವಾಗಿ ಶರಣರ ತಾತ್ವಿಕ ಚಿಂತನೆಗಳನ್ನು ಮನೆಮನೆಗೆ ತಲುಪಿಸುವಲ್ಲಿ ತಮ್ಮನ್ನು ನಿರಂತರ ತೊಡಗಿಸಿಕೊಂಡಿದ್ದಾರೆ.

ಆಕಾಶವಾಣಿ, ದೂರದರ್ಶನಗಳಲ್ಲೂ ತಮ್ಮ ಪ್ರತಿಭೆಯನ್ನು ಪ್ರಕಟಿಸಿರುವ ರೇಣುಕಾ ಅವರು ಅಮೇರಿಕಾದ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ನಾರ್ಥ ಅಮೇರಿಕಾದ ವಿ.ಎಸ್.ಎನ್.ಎ.ದ ವಾರ್ಷಿಕ ಸಮಾವೇಶದಲ್ಲೂ, ಸಿಂಗಾಪುರದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಪಾಲ್ಗೊಂಡ ಖ್ಯಾತಿ ಅವರದು. ಶ್ರೀಮತಿ ಜಿ.ವಿ.ರೇಣುಕಾ ಅವರ ಈ ಎಲ್ಲ ಸಾಧನೆಗೆ ಹಲವಾರು ಮಹತ್ವದ ಪ್ರಶಸ್ತಿಗಳು ಸಂದಿವೆ.

ಶ್ರೀಮತಿ ಜಿ.ವಿ. ರೇಣುಕಾ ಅವರ ಸಾಹಿತ್ಯ ಸೃಷ್ಟಿಯಲ್ಲಿ ಬಹುಪಾಲಿರುವುದು ಆಧುನಿಕ ವಚನಗಳ ರಚನೆಯದು. ಅವರು ಈವರೆಗೆ 2100 ಆಧುನಿಕ ವಚನಗಳನ್ನು ರಚಿಸಿದ್ದಾರೆ. ಸಂಖ್ಯಾತ್ಮಕವಾದ ಈ ಸಾಧನೆ ಬೆರಗುಗೊಳಿಸುವಂಥದ್ದು. ಅತ್ಯಂತ ಸರಳ ಮತ್ತು ಸಹಜವಾದ ರೀತಿಯಲ್ಲಿ ಅಭಿವ್ಯಕ್ತಿ ಪಡೆದಿರುವ ಅವರ ವಚನಗಳು ಗದ್ಯದಂತೆ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿವೆ. ವೈವಿಧ್ಯಪೂರ್ಣ ವಿಷಯ-ವಸ್ತುಗಳನ್ನುಳ್ಳ ಈ ವಚನಗಳು ಆಧುನಿಕ ವಚನರಾಶಿಗೆ ದೊಡ್ಡ ಸಂಖ್ಯೆಯ ಸೇರ್ಪಡೆಯಾಗಿವೆ. ಶ್ರೀಮತಿ ಜಿ.ವಿ.ರೇಣುಕಾ ಅವರ ಈ ಬೃಹತ್ ವಚನರಾಶಿಯನ್ನು ಅನುಲಕ್ಷಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅವರಿಗೆ 2017ನೆಯ ಸಾಲಿನ ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ”ಯನ್ನು ಅತ್ಯಂತ ಸಂತೋಷದಿಂದ ನೀಡಿ ಗೌರವಿಸುತ್ತಿವೆ.

ವಚನ ಸಂಗೀತ ಕ್ಷೇತ್ರ

ವಿದುಷಿ ಶ್ರೀಮತಿ ಸ್ನೇಹಾ ಹಂಪಿಹೊಳಿ

“ಅವ್ಯಾಹತ ಮಾಧುರ್ಯ ಗಾಯಕಿ” ಎಂದು ಹೆಸರು ಮಾಡಿರುವ ವಿದುಷಿ ಶ್ರೀಮತಿ ಸ್ನೇಹಾ ಹಂಪಿಹೊಳಿ ಅವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ಸಂಗೀತಾಧಾರಿತ ವಚನ ಮತ್ತು ದಾಸರ ಕೀರ್ತನಗಳ ಹಾಡುಗಾರಿಕೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಯುವ ಗಾಯಕಿ.

1969ರಲ್ಲಿ ಕಲಬುರ್ಗಿಯಲ್ಲಿ ಜನಿಸಿದ ಇವರು ವಿದುಷಿ ಶ್ರೀಮತಿ ಸರೋಜಾ ಅನಗರಕರ ಅವರಲ್ಲಿ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು. ಆಗ ಮೊಳೆತ ಅವರ ಸಂಗೀತಾಸಕ್ತಿಯನ್ನು ಸಾಧನೆಯ ಮೂಲಕ ಮುಂದುವರೆಸಿದ ಶ್ರೀಮತಿ ಸ್ನೇಹಾ ಅವರು ಶೈಕ್ಷಣಿಕವಾಗಿಯೂ ಸಂಗೀತವನ್ನೇ ಪ್ರಧಾನ ಆಸಕ್ತಿಯಾಗಿ ಬೆಳೆಸಿಕೊಂಡು ಬಂದು ಅದರಲ್ಲಿ “ವಿದ್ವತ್” ಮತ್ತು “ವಿಶಾರದ” ಪರೀಕ್ಷೆಗಳನ್ನು ಉನ್ನತ ಶ್ರೇಣಿಯಲ್ಲಿ ಪಾಸಾದರು.

ಹೆಸರಾಂತ ತಬಲಾ ವಾದಕ ಪಂ. ಶ್ರೀ ಸತೀಶ್ ಹಂಪಿಹೊಳಿ ಅವರ ಜೊತೆ ಮದುವೆಯಾದ ಶ್ರೀಮತಿ ಸ್ನೇಹಾ ಅವರು ಬೆಂಗಳೂರಿನಲ್ಲಿ “ಶ್ರೀ ಸದ್ಗುರು ಮ್ಯೂಸಿಕ್ ಅಕಾಡೆಮಿ ಸ್ಥಾಪಿಸುವಲ್ಲಿ ಅವರ ಪತಿಗೆ ಸಂಪೂರ್ಣ ಸಹಕಾರ ನೀಡಿದರು. ಅಲ್ಲದೆ ಆ ಸಂಸ್ಥೆಯನ್ನು ಪರಂಪರಾಗತ ಸಂಗೀತ ಶಿಕ್ಷಣವನ್ನು ಕೊಡಮಾಡುವ ಒಂದು ಮಾದರಿ ಸಂಗೀತ ಶಾಲೆಯನ್ನಾಗಿ ರೂಪಿಸುವಲ್ಲಿ ಮನಃಪೂರ್ವಕವಾಗಿ ದುಡಿದರು. 1992ರಲ್ಲಿ ಆರಂಭವಾಗಿರುವ ಈ ಸಂಗೀತ ಸಂಸ್ಥೆ ಈಗಾಗಲೆ ಸಂಗೀತಾಸಕ್ತ ಸಾವಿರಾರು ಯುವಕರಿಗೆ ಸಂಗೀತಕಲೆಯ ಧಾರೆಯೆರೆದಿದೆ. ಶಾಸ್ತ್ರೀಯ ಸಂಗೀತಕ್ಕೆ ತಬಲಾ ಸಾಂಗತ್ಯ ಎಷ್ಟು ಅರ್ಥ ತರುತ್ತದೆಯೋ ಅಷ್ಟೇ ಅರ್ಥಪೂರ್ಣ ಮತ್ತು ಅನ್ನೋನ್ಯ ದಾಂಪತ್ಯ ಶ್ರೀ ಸತೀಶ ಹಾಗೂ ಶ್ರೀಮತಿ ಸ್ನೇಹಾ ಹಂಪಿಹೊಳಿ ಅವರದು. ಅದು ಸಂಗೀತಸಾಂಗತ್ಯದ ದಾಂಪತ್ಯ ಕೂಡ.

ಆಕಾಶವಾಣಿಯ “ಎ” ಶ್ರೇಣಿಯ ಕಲಾವಿದೆಯಾಗಿರುವ ಶ್ರೀಮತಿ ಸ್ನೇಹಾ ಹಂಪಿಹೊಳಿ ಅವರು ಆಕಾಶವಾಣಿ ಹಾಗೂ ದೂರದರ್ಶನಗಳ ಮೂಲಕ ನಿರಂತರ ಸಂಗೀತ ಸುಧೆಯನ್ನು ಹರಿಸುತ್ತ ಬಂದಿದ್ದಾರೆ. ಭಕ್ತಿಸಂಗೀತ ಹಾಗೂ ಭಾವಗೀತೆಯ ಹಾಡುಗಾರಿಕೆಯನ್ನು ಶಾಸ್ತ್ರೀಯ ಸಂಗೀತದ ಜೊತೆ ಜೊತೆಯೇ ಬೆರೆಸಿ, ಬೆಳೆಸಿಕೊಂಡು ಬಂದಿರುವ ಅವರು ಈಗಾಗಲೆ ವಚನ ಲಹರಿ, ಭಕ್ತಿನಮನ, ಭಕ್ತಿ ಪುಷ್ಪಾಂಜಲಿ, ಹೇಗೆ ಅರ್ಚಿಸಲಿ, ಶ್ರಾವಣ ಸಂಪತ್ತು, ಗೀತ ಪುರಂಧರ, ಶ್ರೀ ಪುರಂಧರ, ಬಕುಲದ ಹೂಗಳು-ಮೊದಲಾದ ಧ್ವನಿತಟ್ಟೆಗಳನ್ನು ಹೊರತಂದಿದ್ದಾರೆ.

ವಚನಗಾಯನ ಅವರ ಅತ್ಯಂತ ಪ್ರೀತಿಯ ಸಂಗೀತ ಕ್ಷೇತ್ರವಾಗಿದ್ದು, ವಚನಗಳನ್ನು ಅವುಗಳ ಅರ್ಥಾನುಸಾರಿಯಾದ ರಾಗ ಮತ್ತು ಲಯಗಾರಿಕೆಯೊಂದಿಗೆ ಪ್ರಸ್ತುತಪಡಿಸುವಲ್ಲಿ ಅವರ ಹೆಚ್ಚುಗಾರಿಕೆಯಿದೆ. ತಮ್ಮ ಪ್ರತಿಯೊಂದು ಕಛೇರಿಗಳಲ್ಲೂ ಅವರು ವಚನಗಳ ಸುಧೆಯನ್ನು ಹರಿಸುವುದು ಗಮನಾರ್ಹ ಅಂಶ.

‘ಪಂಡಿತ ಪುಟ್ಟರಾಜ ಕೃಪಾಭೂಷಣ’, ‘ಯಡೆಯೂರು ಶ್ರೀ ಸಿದ್ಧಲಿಂಗೇಶ್ವರ ಪ್ರಶಸ್ತಿ’, ‘ಸ್ವರಕಲಾಶ್ರೀ’, ‘ಆರ್ಯಭಟ ಪ್ರಶಸ್ತಿ’, ‘ಸ್ವರಮಾಧುರಿ’, ‘ಸ್ವರದಂಪತಿ’ -ಮೊದಲಾದ ಹಲವಾರು ಗೌರವಗಳಿಗೆ ಪಾತ್ರರಾಗಿರುವ ವಿದುಷಿ ಶ್ರೀಮತಿ ಸ್ನೇಹಾ ಹಂಪಿಹೊಳಿ ಅವರು ವಚನಗಾಯನದಲ್ಲಿ ಮಾಡಿರುವ ಸಾಧನೆಯನ್ನು ಮನ್ನಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅವರಿಗೆ 2017ನೆಯ ಸಾಲಿನ “ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ”ಯನ್ನು ಅತ್ಯಂತ ಸಂತೋಷದಿಂದ ನೀಡಿ ಗೌರವಿಸುತ್ತಿವೆ.

ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ

ನಮ್ಮ ಮಕ್ಕಳು ಸಂಸ್ಥೆ - ಶ್ರೀ ಸ. ರಘುನಾಥ

ಖಾಯಂ ವಿಳಾಸವಿಲ್ಲದ ಶ್ರೀ ಸ.ರಘುನಾಥ ಅವರದು ಸಾವು ಗೆದ್ದ ಜೀವ, ರೈಲಿನ ಹಳಿಯ ಮೇಲೆ ಬಿದ್ದು ಸಾಯಲು ಹೋದ ಅವರನ್ನು ಸಾವು ಸಮೀಪಿಸಲಿಲ್ಲ; ಆದರೆ ಬದುಕಿನಿಡೀ ಒಂಟಿಗಾಲಿನ ಪಯಣಕ್ಕೆ ಹಚ್ಚಿತು. 1954ರಲ್ಲಿ ಜನಿಸಿದ ರಘುನಾಥ ಅವರು ಎಸ್.ಎಸ್.ಎಲ್.ಸಿ ವರೆಗೆ ಮಾತ್ರ ಓದಿದವರು. ಆದರೆ ಬದುಕಿನ ಪಾಠಶಾಲೆಯಲ್ಲಿ ಅವರು ಓದಿದ್ದು ಅಪಾರ. ದೀರ್ಘಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಗಿದ ಅವರು – ಅದಕ್ಕಿಂತಲೂ ಮಿಗಿಲಾಗಿ ನೊಂದ, ಅನಾಥ, ಭಿಕ್ಷುಕ, ವೃದ್ಧ, ಅಂಗವಿಕಲ ಜೀವಿಗಳಿಗೆ ಬದುಕು ಕೊಟ್ಟವರು. ಪರಿಸರ, ಪ್ರಾಣಿ-ಪಕ್ಷಿ ಸಂಕುಲದ ಆಪ್ತರಕ್ಷಕರಾಗಿಯೂ ರಘುನಾಥ ಅನನ್ಯ ಕೆಲಸ ಮಾಡಿದ್ದಾರೆ.

ಎಂಟು ತಿಂಗಳ ಗರ್ಭಿಣಿ ಭಿಕ್ಷುಕಿಯೊಬ್ಬಳು ಬೇವಿನ ಮರದಡಿ ಅನಾಥವಾಗಿ ಬಿದ್ದು ಒದ್ದಾಡುತ್ತಿರುವಾಗ, ಹುಟ್ಟುವ ಕೂಸಿಗೆ ಶಿಕ್ಷಣ ಕೊಡಿಸುವ ಕರಾರಿನೊಂದಿಗೆ ಅವಳ ಸಹಾಯಕ್ಕೆ ನಿಂತ ಶ್ರೀ ರಘುನಾಥ ಈ ಬಗೆಯ ಜೀವದಾಯಿ ಸೇವೆಯನ್ನು ಆರಂಭಿಸಿದ್ದು 1982ರಿಂದ. ಗೌನಿಪಲ್ಲಿಯಲ್ಲಿ ಆರಂಭವಾದ ಈ ಪಯಣ ಮುಂದೆ ಚಿಂದಿ ಆಯುವ, ಭಿಕ್ಷೆ ಬೇಡುವ, ಅಲೆಮಾರಿ ಹಾಗೂ ಪಾಲಕ-ಪೋಷಕರಿಲ್ಲದ ಮಕ್ಕಳಿಗೆ ಶಿಕ್ಷಣ ಕೊಡುವ ಮೂಲಕ ಸಾಗಿತು. ಹೆಸರಿರಲಿ ಎಂದು “ಬೀದಿ ಬದಿಯ ಮಕ್ಕಳು” ಎಂಬ ಹೆಸರಿನೊಂದಿಗೆ ಆರಂಭವಾದ ಸಂಸ್ಥೆ ನಂತರ “ನಮ್ಮ ಮಕ್ಕಳು” ಎಂದಾಯಿತು. ಈಗ ಅದು ದೊಡ್ಡದಾಗಿ ಬೆಳೆಯುತ್ತಿದೆ.

ತಮ್ಮ ಸಂಬಳದ ಒಂದು ಭಾಗವನ್ನು, ಬರಹಗಳಿಂದ ಬರುತ್ತಿದ್ದ ಸಂಭಾವನೆಯನ್ನು ಮತ್ತು ಆಕಾಶವಾಣಿಯಿಂದ ಸಿಗುತ್ತಿದ್ದ ಗೌರವಧನವನ್ನು “ನಮ್ಮ ಮಕ್ಕಳು” ಸಂಸ್ಥೆಗೇ ವ್ಯಯಿಸಿರುವ ಶ್ರೀ ಸ. ರಘುನಾಥ ಅವರು ಈವರೆಗೆ 120 ನಿರ್ಗತಿಕ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಮುಖ್ಯವಾಹಿನಿಯಲ್ಲಿ ಸೇರಿಸಿದ್ದಾರೆ. 1200ಕ್ಕೂ ಅಧಿಕ ವನ್ಯಜೀವಿಗಳಿಗೆ ಆರೈಕೆ ಮಾಡಿದ್ದಾರೆ. 20000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಗಿಡಮೂಲಿಕೆಗಳಿಂದ ಔಷಧಿ ತಯಾರಿಸಿ ಕೊಟ್ಟು 500ಕ್ಕೂ ಹೆಚ್ಚಿನ ವೃದ್ಧರು ಮತ್ತು ಬಡವರ ಆರೋಗ್ಯ ಕಾಪಾಡಿದ್ದಾರೆ.

ಕನ್ನಡದ ಹೆಸರಾಂತ ಕವಿಯಾಗಿರುವ ರಘುನಾಥ 8 ಕವನ ಸಂಕಲನಗಳನ್ನು, 3 ಕಥಾಸಂಕಲನಗಳನ್ನು, 3 ವಿಮರ್ಶಾ ಕೃತಿಗಳನ್ನು, 3 ಶಿಶುಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ಕನ್ನಡದಿಂದ ತೆಲುಗಿಗೆ 4 ಕೃತಿಗಳನ್ನು, ತೆಲುಗಿನಿಂದ ಕನ್ನಡಕ್ಕೆ 13 ಕೃತಿಗಳನ್ನು ಅನುವಾದಿಸಿರುವ ಅವರು ಜಾನಪದ, ಸಂಪಾದನೆ, ಅಂಕಣಬರಹ ಮೊದಲಾದ ಕ್ಷೇತ್ರಗಳಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ವಚನ ಸಾಹಿತ್ಯದಲ್ಲಿ ವಿಶೇಷ ಅಧ್ಯಯನ ಮಾಡಿರುವ ಅವರು “ವಚನಮು” ಎಂಬ ಗ್ರಂಥವನ್ನು ಪ್ರಕಟಿಸಿದ್ದಾರೆ. ಬಸವಣ್ಣನವರ 101 ವಚನಗಳನ್ನು ತೆಲುಗಿಗೆ ಅನುವಾದಿಸಿದ್ದಾರೆ.

ನೊಂದವರ ನೋವನ್ನು ನಿವಾರಿಸುವ ಸ್ವಾರ್ಥರಹಿತ ಸೇವೆಯಲ್ಲಿ ತೊಡಗಿರುವ ಕಾರಣಕ್ಕಾಗಿ ಹಾಗೂ ವಚನ ಸಾಹಿತ್ಯವನ್ನು ತೆಲುಗಿಗೆ ತಲುಪಿಸುವ ಕೈಂಕರ್ಯದಲ್ಲಿ ತೊಡಗಿರುವ ಕಾರಣಕ್ಕಾಗಿ ‘ನಮ್ಮ ಮಕ್ಕಳು’ – ಸಂಸ್ಥೆಯ ಸಂಸ್ಥಾಪಕ ಶ್ರೀ ಸ. ರಘುನಾಥ ಅವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅತ್ಯಂತ ಪ್ರೀತಿಯಿಂದ 2017ರ “ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿವೆ.

ರಮಣಶ್ರೀ ಶರಣ ವಚನ ಸಂಶೋಧಕ ಪ್ರಶಸ್ತಿ

ಡಾ. ಬಸವಕುಮಾರ ಶರಣರು

“ವಚನ ಸಾಹಿತ್ಯ : ವಚನೋತ್ತರ ಅನುಸಂಧಾನಗಳು” ಎಂಬ ವಿಷಯ ಕುರಿತು ಮಹಾಪ್ರಬಂಧವನ್ನು ಮಂಡಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 2016ರಲ್ಲಿ ಪಿಎಚ್.ಡಿ ಪದವಿ ಪಡೆದಿರುವ ಡಾ. ಕುಮಾರಸ್ವಾಮಿ ಆರ್. ಟಿ. ಅವರು ಮೂಲತಃ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕಿನ ಹೊಸಳ್ಳಿಯವರು. ಇವರು ಜನಿಸಿದ್ದು 1980ರ ಮೇ 17ರಂದು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಜೀಯವರ ಜೊತೆಯಲ್ಲಿ ಸೆರೆಮನೆ ವಾಸವನ್ನು ಅನುಭವಿಸಿದ ಹೊಸಳ್ಳಿಯ ಲಿಂಗಾಯ್ತ ಗಂಗಜ್ಜನವರು ಇವರ ತಾತ. ಗಂಗಜ್ಜನವರ ಧರ್ಮಪತ್ನಿ ಶತಾಯುಷಿ ನಿಂಗಜ್ಜಿಯವರು ಈಗಲೂ ಸ್ವಾತಂತ್ರ್ಯ ಹೋರಾಟಗಾರರ ಪೆನ್ನನ್ ಪಡೆಯುತ್ತಿದ್ದಾರೆ. ಇವರ ಮೊಮ್ಮಗನೇ ಆರ್.ಟಿ. ಕುಮಾರಸ್ವಾಮಿಯವರು. ತಂದೆ ಆರ್. ವೈ. ತಿಪ್ಪೇರಣ್ಣ. ತಾಯಿ ಎಲ್. ಜಿ. ರತ್ನಮ್ಮ.

ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿಯೇ ಚಿತ್ರದುರ್ಗದ ಶ್ರೀ ಮುರುಘಾ ಶರಣರರಿಂದ ಕಾವಿ ದೀಕ್ಷೆಯನ್ನು ಪಡೆದ ಇವರು ಚಿತ್ರದುರ್ಗದಲ್ಲಿ ಹೈಯರ್ ಪ್ರೈಮರಿಯಿಂದ ಸ್ನಾತಕೋತ್ತರದವರೆಗೆ ಶಿಕ್ಷಣವನ್ನು ಪೂರೈಸಿದರು. ಬಸವತತ್ವ ಮಹಾವಿದ್ಯಾಲಯದಲ್ಲಿ ಸಾಧಕ-ಬೋಧಕ-ಸುಧಾರಕ ಎಂಬ ಮೂರು ವರ್ಷದ ಪದವಿಯನ್ನು ಪಡೆದಿರುವ ಇವರು ಶ್ರೀ ಮುರುಘಾಶರಣರ ಮಾರ್ಗದರ್ಶನದಂತೆ ಬೆಂಗಳೂರಿನ ಬಸವಕೇಂದ್ರ, ತಿಪ್ಪಶೆಟ್ಟಿ ಮಠ, ಗಾಂಧಿನಗರದ ಪೀಠಾಧಿಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ಕೊಲ್ಲಾಪುರದ ಮುರುಘಾಮಠ, ಚಿತ್ರದುರ್ಗದ ಶಾಖಾಮಠ, ಹರಿಹರದ ವೇಮನ ಪೀಠಗಳ ನೇತೃತ್ವವನ್ನು ವಹಿಸಿದ ಶ್ರೀ. ಬಸವಕುಮಾರ ಶರಣರು ಹಲವಾರು ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು
ಹಮ್ಮಿಕೊಂಡು ಸಮಾಜಸೇವೆ ಮಾಡುತ್ತಿದ್ದಾರೆ.

ಪೀಠಾಧಿಪತಿಗಳಾದ ನಂತರ ಇವರ ಹೆಸರು ಶ್ರೀ ಬಸವಕುಮಾರ ಶರಣರು ಎಂದು ಬದಲಾಗಿದೆ. ಶ್ರೀ ಬಸವಕುಮಾರ ಶರಣರು ಸತತವಾಗಿ ಶರಣ ಸಂಗಮ, ಸದ್ಭಾವನಾ ಚಿಂತನೆ, ವಿಶ್ವ ಅಂಗವಿಕಲರ ದಿನಾಚರಣೆ, ಕೊಳೆಗೇರಿಯಲ್ಲಿ ಜನಜಾಗೃತಿ ಪಾದಯಾತ್ರೆ, ಶರಣ ಸಂಸ್ಕೃತಿ ಉತ್ಸವ-ಹೀಗೆ ಹಲವು ಹತ್ತು ಕಾರ್ಯಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.

ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನಾಡಿನ ಶರಣರು ಆರಂಭಿಸಿದ ವಚನ ಚಳವಳಿಯು ಬಹಳ ಮುಖ್ಯವಾಗಿ ಸಮಾನತೆಯ ನೆಲೆಯದಾಗಿತ್ತು. ಇದರ ಜೊತೆಗೆ ಅವರು ರೂಪಿಸಿದ ಕಾಯಕ ಮತ್ತು ದಾಸೋಹದ ಪರಿಕಲ್ಪನೆ ವ್ಯಕ್ತಿಯನ್ನು ಪ್ರಾಮಾಣಿಕ ದುಡಿಮೆಗೆ ತೊಡಗಿಸುವುದರೊಂದಿಗೆ ಸಮಾಜದ ವಿವಿಧ ರಂಗಗಳಲ್ಲಿ ಪ್ರಮುಖ ಬದಲಾವಣೆಗಳಿಗೆ ಕಾರಣವಾಯಿತು. ಧರ್ಮದ ಜಡತ್ವವನ್ನು ಪ್ರಶ್ನಿಸಿ ಹೊಸ ಸಮಾಜ ರಚನೆಗೆ ಕಾರಣರಾದ ಶರಣರ ಇಂಥ ಕ್ರಾಂತಿಯ ಸೈದ್ಧಾಂತಿಕತೆಯು ವಚನೋತ್ತರದ ಕಾಲಘಟ್ಟದಲ್ಲಿಯೂ ಪ್ರಮುಖವಾದ ಪ್ರಭಾವವನ್ನು ಬೀರುತ್ತಲೇ ಬಂತು. ಈ ಪ್ರಭಾವದ ಸ್ವರೂಪವೇನು? ತದನಂತರದಲ್ಲಿ ಆಗಿರುವ ಪಲ್ಲಟಗಳು ಯಾವುವು? ಎಂಬುದನ್ನು ಸಂಶೋಧನಾತ್ಮಕ ನೆಲೆಯಲ್ಲಿ ವಿಶ್ಲೇಷಿಸುತ್ತದೆ ಡಾ. ಬಸವಕುಮಾರ ಶರಣರ ಮಹಾಪ್ರಬಂಧ, ವಚನಕಾರರು ರೂಪಿಸಿದ ‘ಲಿಂಗವಂತ’ ಸಮಾಜವು ವಚನೋತ್ತರದ ಸಂದರ್ಭದಲ್ಲಿ ಧರ್ಮೀಕರಣಗೊಂಡಿತೆಂದು ಹೇಳುವ ಶ್ರೀ ಬಸವಕುಮಾರ ಶರಣರು ಆ ಕಾಲಘಟ್ಟವನ್ನು ಸೃಜನಾನುಸಂಧಾನ, ಸಂಕಲನಾನುಸಂಧಾನ ಮತ್ತು ಜನಪದಾನುಸಂಧಾನ ಎಂಬ ಮೂರು ವಿಭಿನ್ನ ನೆಲೆಗಳಲ್ಲಿ ಈ ಮಹಾಪ್ರಬಂಧದಲ್ಲಿ ವಿಶ್ಲೇಷಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವೆಂಕಟೇಶ ಇಂದ್ವಾಡಿ ಅವರು ಡಾ. ಬಸವಕುಮಾರ ಶರಣರಿಗೆ ಪಿಎಚ್‌.ಡಿ ಮಾರ್ಗದಶಕರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರಿನ ರಮಣಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ, ಈ ವರ್ಷದಿಂದ “ರಮಣಶ್ರೀ ಶರಣ ವಚನ ಸಂಶೋಧಕ ಪ್ರಶಸ್ತಿ”ಯನ್ನು ಕೊಡಮಾಡಲು ಆರಂಭಿಸಿದೆ. ವಚನ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಶೋಧನ ಅಧ್ಯಯನ ಪೂರೈಸಿ ಪಿಎಚ್.ಡಿ. ಪದವಿ ಪಡೆಯುವ ಇಬ್ಬರು ಸಂಶೋಧಕರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. “ವಚನ ಸಾಹಿತ್ಯ ; ವಚನೋತ್ತರ ಅನುಸಂಧಾನಗಳು” ಎಂಬ ವಿಷಯ ಕುರಿತು ಸಂಶೋಧನೆ ನಡೆಸಿ, 2016ನೆಯ ಸಾಲಿನಲ್ಲಿ ಪಿಎಚ್.ಡಿ. ಪದವಿ ಪಡೆದಿರುವ ಡಾ. ಬಸವಕುಮಾರ ಶರಣರಿಗೆ 2017ನೆಯ ಸಾಲಿನ “ರಮಣಶ್ರೀ ಶರಣ ವಚನ ಸಂಶೋಧಕ ಪ್ರಶಸ್ತಿ” ನೀಡಿ ಗೌರವಿಸಲು ಎರಡೂ ಸಂಸ್ಥೆಗಳು ಹರ್ಷಿಸುತ್ತವೆ.

ರಮಣಶ್ರೀ ಶರಣ ವಚನ ಸಂಶೋಧಕ ಪ್ರಶಸ್ತಿ

ಡಾ. ದಂಡೆ ನಂದೀಶ್ವರ

“ವೃತ್ತಿನಿರತ ವಚನಕಾರರು : ವಚನಗಳ ಅಭಿವ್ಯಕ್ತಿ ಸ್ವರೂಪ ಮತ್ತು ತಾತ್ವಿಕತೆ” ಈ ವಿಷಯ ಕುರಿತಾಗಿ ತಮ್ಮ ಸಂಶೋಧನ ಪ್ರಬಂಧ ಮಂಡಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 2016ರಲ್ಲಿ ಪಿಎಚ್.ಡಿ ಪದವಿ ಪಡೆದ wo. ದಂಡೆ ನಂದೀಶ್ವರ ಅವರು ಮೂಲತಃ ಹೊಸಪೇಟೆಯವರು.

1984ರ ಜುಲೈ ಒಂದರಂದು ಹೊಸಪೇಟೆ ತಾಲೂಕಿನ ಕೊಂಡನಾಯಕನಹಳ್ಳಿಯಲ್ಲಿ ಜನಿಸಿದ ಶ್ರೀ ದಂಡೆ ನಂದೀಶ್ವರ ಅವರದು ರೈತಾಪಿ ಕುಟುಂಬ. ತಂದೆ ದೊಡ್ಡಬಸಪ್ಪ ಮತ್ತು ತಾಯಿ ಈರಮ್ಮ ನಿರಕ್ಷರಿಗಳು, ಶ್ರೀ ನಂದೀಶ್ವರ ಈ ಇಡೀ ಕುಟುಂಬದ ಮೊದಲ ಪದವೀಧರ. ಶರಣರ ಬದುಕಿನ ಆದರ್ಶಗಳನ್ನು ತಮ್ಮ ಜಿನಜೀವನದಲ್ಲಿ ಅಳವಡಿಸಿಕೊಂಡು ಅತ್ಯಂತ ಪ್ರಾಮಾಣಿಕ ಜೀವನ ನಿರ್ವಹಿಸುತ್ತಿರುವ ಇವರ ಪಾಲಕರು ಊರಿಗೆಲ್ಲ ಮಾದರಿಯೆನಿಸಿದ್ದಾರೆ. ವಚನಗಳನ್ನು ಭಜನೆಯ ಮೂಲಕ ಹಾಡುವುದು ಮತ್ತು ವಚನ ಭಜನೆ ಮಾಡುತ್ತಲೇ ಶರಣ ಕ್ಷೇತ್ರಗಳ ದರ್ಶನ ಮಾಡುವುದು ಇವರ ತಂದೆ ದೊಡ್ಡಬಸಪ್ಪ ಅವರ ನೇಮ. ಇಂಥ ಸಂಸ್ಕಾರದಲ್ಲಿ ಬಂದ ಶ್ರೀ ದಂಡೆ ಅವರು ಸಹಜವಾಗಿಯೇ ಶರಣರ ವಚನಗಳು ಮತ್ತು ಅವುಗಳ ತಾತ್ವಿಕತೆಯತ್ತ ವಾಲಿದರು.

ವಚನಕಾರರನ್ನು ಹಾಗೂ ವಚನಗಳ ವರ್ತಮಾನದ ಪ್ರಸ್ತುತತೆಯನ್ನು ಕುರಿತು ಹಲವಾರು ಲೇಖನಗಳನ್ನು ಪ್ರಕಟಿಸಿರುವ ಶ್ರೀ ದಂಡೆ ನಂದೀಶ್ವರರವರು ಒಬ್ಬ ವೈಚಾರಿಕ ಕಥೆಗಾರರೂ ಆಗಿದ್ದಾರೆ. ‘ವಿಜಯ ಕಲ್ಯಾಣ’ ಎಂಬ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿರುವ ಅವರು ಆ ಪ್ರಕಾಶನದಿಂದ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ, ಹೆಸರಾಂತ ಕಥೆಗಾರರೂ ಆಗಿರುವ ಡಾ. ಎನ್. ಅಮರೇಶ್ ಅವರ ಮಾರ್ಗದರ್ಶನದಲ್ಲಿ ‘ವೃತ್ತಿನಿರತ ವಚನಕಾರರು : ವಚನಗಳ ಅಭಿವ್ಯಕ್ತಿ ಸ್ವರೂಪ ಮತ್ತು ತಾತ್ವಿಕತೆ’ ಎಂಬ ವಿಷಯವಾಗಿ ಸಂಶೋಧನಾಧ್ಯಯನ ನಡೆಸಿರುವ ಶ್ರೀ ದಂಡೆ ನಂದೀಶ್ವರ ಅವರಿಗೆ ಕನ್ನಡ ವಿಶ್ವವಿದ್ಯಾಲಯವು 2016ನೆಯ ವರ್ಷದಲ್ಲಿ ಪಿಎಚ್‌.ಡಿ.ಪದವಿಯನ್ನು ಕೊಡಮಾಡಿದೆ.

ಭಕ್ತಿ ಅಥವಾ ವಚನಪೂರ್ವ ಕಾಲದಲ್ಲಿ ಕಾಯಕ ಜೀವಿಗಳಿಗೆ ಮತ್ತು ಅವರ ಕಾಯಕಗಳಿಗೆ ಅಷ್ಟೊಂದು ಗೌರವ ಇರಲಿಲ್ಲ. ಆದರೆ ಸಮಾಜದ ಬುನಾದಿಯಲ್ಲೇ ಈ ಕಾಯಕ ಜೀವಿಗಳಿದ್ದು, ಇಡೀ ಸಮಾಜವನ್ನು ಅವರೇ ತಮ್ಮ ಶ್ರಮದ ಮೂಲಕ ಹೊತ್ತು ಮುನ್ನಡೆಸುತ್ತಿದ್ದರು. ಅಕ್ಷರ ಜ್ಞಾನವುಳ್ಳವರಿಗಿಂತ ಕಾಯಕದಲ್ಲಿ ಪರಿಣತರಾದ ಈ ಶ್ರಮಜೀವಿಗಳು ಕಾಯಕವನ್ನೇ ತಮ್ಮ ಬದುಕಿನ ಜ್ಞಾನದ ಸಂಪತ್ತನ್ನಾಗಿ ಮಾಡಿಕೊಂಡವರು. ಬಸವಣ್ಣನವರ ಹೊಸ ಕ್ರಾಂತಿಯ ಸಂದರ್ಭದಲ್ಲಿ ಈ ಕಾಯಕ ಜೀವಿಗಳಿಗೆ ಒಂದು ಹೊಸ ನೆಲೆ ಸಿಕ್ಕಿತು. ಆ ಚಳವಳಿಯಲ್ಲಿ ಪಾಲ್ಗೊಂಡ ಇಂಥ ವೃತ್ತಿನಿರತ ವಚನಕಾರರನೇಕರು ತಮ್ಮ ಕಾಯಕವನ್ನು ಉನ್ನತ ಧಾರ್ಮಿಕ ನೆಲೆಗೇರಿಸಿದರು. ಅವರ ಅನೇಕ ವಚನಗಳಲ್ಲಿ ವಿವಿಧ ಕಾಯಕಗಳ ಅನನ್ಯ ಜಗತ್ತು ಅನಾವರಣಗೊಳ್ಳುತ್ತದೆ. ಇಂಥ ಕಾಯಕ ಜೀವಿಗಳ ವಚನಗಳೆಂದರೆ ಅವು ಕ್ರಿಯೆಯ ಮೂಲಕ ಜ್ಞಾನವನ್ನು ಅರುಹಿಕೊಡುವ ವಿಶಿಷ್ಟ ಅಭಿವ್ಯಕ್ತಿಗಳು. ಶರಣರನೇಕರ ದುಡಿಮೆ ಮತ್ತು ಬೆವರಿನ ಫಲಗಳಾಗಿ ಮೂಡಿಬಂದಿರುವ ಇಂಥ ವಚನಗಳು ಸಮಾಜದ ಆರ್ಥಿಕ ಮುಖವನ್ನು ಬೇರೆ ರೀತಿಯಲ್ಲೇ ರೂಪಿಸಿದವು. ಶ್ರಮ ಮತ್ತು ಧರ್ಮ ಕೂಡಿದ ಹೊಸ ಶ್ರಮಧರ್ಮವೊಂದರ ನಿರ್ಮಾಣಕ್ಕೆ ಕಾರಣರಾದ ಇಂಥ ವೃತ್ತಿನಿರತ ವಚನಕಾರರು ಮತ್ತು ಅವರ ವಚನಗಳನ್ನು ಮುಖಾಮುಖಿಯಾಗಿಸಿ ನಡೆಸಿದ ವಿಶಿಷ್ಟ ಅಧ್ಯಯನ ಡಾ. ದಂಡೆ ನಂದೀಶ್ವರ ಅವರದು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರಿನ ರಮಣಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ಈ ವರ್ಷದಿಂದ “ರಮಣಶ್ರೀ ಶರಣ ವಚನ ಸಂಶೋಧಕ ಪ್ರಶಸ್ತಿ”ಯನ್ನು ಕೊಡಮಾಡಲು ಆರಂಭಿಸಿದೆ. ವಚನ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಶೋಧನ ಅಧ್ಯಯನ ಪೂರೈಸಿ ಪಿಎಚ್.ಡಿ. ಪದವಿ ಪಡೆಯುವ ಇಬ್ಬರು ಸಂಶೋಧಕರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. “ವೃತ್ತಿನಿರತ ವಚನಕಾರರು : ವಚನಗಳ ಅಭಿವ್ಯಕ್ತಿ ಸ್ವರೂಪ ಮತ್ತು ತಾತ್ವಿಕತೆ” ಎಂಬ ವಿಷಯ ಕುರಿತ ಸಂಶೋಧನೆ ನಡೆಸಿ, 2016ನೆಯ ಸಾಲಿನಲ್ಲಿ ಪಿಎಚ್.ಡಿ. ಪದವಿ ಪಡೆದಿರುವ ಡಾ. ದಂಡೆ ನಂದೀಶ್ವರ ಅವರಿಗೆ 2017ನೆಯ ಸಾಲಿನ “ರಮಣಶ್ರೀ ಶರಣ ವಚನ ಸಂಶೋಧಕ ಪ್ರಶಸ್ತಿ” ನೀಡಿ ಗೌರವಿಸಲು ಎರಡೂ ಸಂಸ್ಥೆಗಳು ಹರ್ಷಿಸುತ್ತವೆ.