ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ

2019

ರಮಣಶ್ರೀ ಶರಣ ಜೀವಮಾನ ಸಾಧನ ಸನ್ಮಾನ

ಪದ್ಮಶ್ರೀ ಶ್ರೀ ಇಬ್ರಾಹೀಮ ನ. ಸುತಾರ

ಬಾಗಲಕೋಟ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಹಾಲಿಂಗಪುರದಲ್ಲಿ 10.5.1940ರಲ್ಲಿ ಶ್ರೀ ಇಬ್ರಾಹೀಮ ನ. ಸುತಾರ ಅವರ ಜನನ.

1970ರಲ್ಲಿ ‘ಭಾವೈಕ್ಯ ಜನಪದ ಸಂಗೀತ ಮೇಳ’ವನ್ನು ಸ್ಥಾಪಿಸಿದರು. 44 ವರ್ಷಗಳಿಂದ ನಾಡಿನಾದ್ಯಂತ ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜಸೇವೆಯ ಮುಖಾಂತರ ಎಲ್ಲ ಮಹಾತ್ಮರ ಭಾವೈಕ್ಯತೆಯ ಸಂದೇಶವನ್ನು ಸಮಾಜಕ್ಕೆ ಉಣಬಡಿಸುತ್ತ ಹಿಂದೂ-ಮುಸ್ಲಿಂ ಭಾವೈಕ್ಯತೆ ಬೆಸೆಯುವ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಪರಮಾರ್ಥ ಲಹರಿ ಮತ್ತು ತತ್ತ್ವಜ್ಞಾನಕ್ಕೆ ಸರ್ವರೂ ಅಧಿಕಾರಿಗಳು ಎಂಬ ಪುಸ್ತಕಗಳನ್ನು ರಚಿಸಿದ್ದಾರೆ. ಪರಮಾರ್ಥ ಗೀತೆಗಳು ಮತ್ತು ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ ಎಂಬ ಕವನಗಳನ್ನು ರಚಿಸಿದ್ದಾರೆ. 6 ಜನ ಸಹ ಕಲಾವಿದರ ತಂಡದೊಂದಿಗೆ ತತ್ತ್ವಪದಗಳನ್ನು ಹಾಡಲು ಭಾವೈಕ್ಯ ಭಕ್ತಿ ರಸಮಂಜರಿ, ಆಧ್ಯಾತ್ಮ ಸಂವಾದ ತರಂಗಿಣಿ ಎಂಬ ವಿನೂತನ ಕಲಾ ಪ್ರಕಾರ ಹುಟ್ಟು ಹಾಕಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಧ್ವನಿ ಸುರುಳಿಗಳನ್ನು ಬಿಡುಗಡೆಗೊಳಿಸಿದ್ದಾರೆ.

ನಾಡಿನ ಹಲವಾರು ಪ್ರಮುಖ ಉತ್ಸವಗಳಲ್ಲಿ ಭಾವೈಕ್ಯದ ಸಂದೇಶವನ್ನು ಪ್ರವಚನ ಮತ್ತು ಗೀತ ಸಂವಾದ ತರಂಗಿಣಿ ಮೂಲಕ ನೀಡಿದ್ದಾರೆ. ಐತಿಹಾಸಿಕ ಬಸವ ಶಾಂತಿ ಜ್ಯೋತಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಹೊರರಾಜ್ಯಗಳಲ್ಲಿಯೂ ಸಹ ಸಾಮರಸ್ಯದ ಸಂದೇಶವನ್ನು ನೀಡಿದ್ದಾರೆ.

ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿಗಳು ಲಭಿಸಿವೆ. ಅಲ್ಲದೆ ಭಾವೈಕ್ಯರಂಗದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ ನಾಡಿನ ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ. ಜೀವನದುದ್ದಕ್ಕೂ ಭಾವೈಕ್ಯತೆಯ ಸಂದೇಶವನ್ನು ಸಾರುತ್ತ ವಿಶ್ವಪ್ರೇಮವನ್ನು ಬೆಳೆಸುವುದು ಇವರ ಜೀವನದ ಗುರಿಯಾಗಿದೆ.

ತಮ್ಮ ಆದರ್ಶ ವ್ಯಕ್ತಿತ್ವದ ಮೂಲಕ ನಾಡಿಗೇ ಮಾದರಿಯಾಗಿರುವ ಪದ್ಮಶ್ರೀ ಶ್ರೀ ಇಬ್ರಾಹೀಮ ನ. ಸುತಾರ ಅವರು ಶರಣ ಸಂಸ್ಕೃತಿ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಮಾಡಿರುವ ಜೀವಮಾನದ ಸಾಧನೆಗಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅವರಿಗೆ 2019ನೆಯ ಸಾಲಿನ “ರಮಣಶ್ರೀ ಶರಣ ಜೀವಮಾನದ ಸಾಧಕ ಸನ್ಮಾನ”ವನ್ನು ಅತ್ಯಂತ ಪ್ರೀತಿ ಮತ್ತು ಅಭಿಮಾನದಿಂದ ನೀಡಿ ಗೌರವಿಸುತ್ತಿವೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಹಿರಿಯ ಶ್ರೇಣಿ

ಶರಣ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಲೇಖಕರನ್ನು ಸನ್ಮಾನಿಸಲಾಯಿತು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರ

ಡಾ. ಜಯಶ್ರೀ ದಂಡೆ

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರಿನಲ್ಲಿ 3-3-1958ರಂದು ಜನನ. ಸುಮಿತ್ರಾದೇವಿ ಹಾಗೂ ಸಿದ್ರಾಮಪ್ಪ ಅಂಗಡಿ ಇವರ ತಾಯಿ ತಂದೆ, ಇಲಕಲ್ಲಿನಲ್ಲಿ ಮತ್ತು ಬಾಗಲಕೋಟೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ. ಪದವಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ 1987ರಲ್ಲಿ ಪಿಎಚ್.ಡಿ. ಪದವಿ.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕಿಯಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ, ‘ಬಸವಾದಿ ಶರಣ ಸಾಹಿತ್ಯ ಕೇಂದ್ರ’ದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಕರ್ನಾಟಕ ರಾಜ್ಯದ ಉಚ್ಛ ನ್ಯಾಯಾಲಯದ ಆದೇಶದಂತೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಸಮಾಲೋಚಕಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಮಾರ್ಗದರ್ಶನದಲ್ಲಿ 15 ವಿದ್ಯಾರ್ಥಿಗಳು ಪಿಎಚ್.ಡಿ. ಪದವಿ ಪಡೆದು ಕೊಂಡಿದ್ದಾರೆ. 20 ವಿದ್ಯಾರ್ಥಿಗಳು ಎಂ.ಫಿಲ್. ಪದವಿ ಪಡೆದುಕೊಂಡಿದ್ದಾರೆ. 8 ವಿದ್ಯಾರ್ಥಿಗಳು ಪಿಎಚ್.ಡಿ. ಅಧ್ಯಯನ ಮಾಡುತ್ತಿದ್ದಾರೆ.

2009-12ರ ಅವದಿಯಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಭಾಷಾಭಿವೃದ್ಧಿ ಯೋಜನೆ ಯಡಿಯಲ್ಲಿ “ಶರಣ ಸ್ಮಾರಕಗಳ ಕ್ಷೇತ್ರಕಾರ್ಯ” ಸಂಶೋಧನಾ ಕಾರ್ಯ ಪೂರೈಸಿ “12ನೇ ಶತಮಾನದ ಶರಣ ಸ್ಮಾರಕಗಳು, ಭಾಗ-1” ಮತ್ತು 2014-15 ರಲ್ಲಿ ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ, ಬೆಂಗಳೂರು ಇವರ ನೆರವಿನಿಂದ 12ನೇ ಶತಮಾನದ ಶರಣ ಸ್ಮಾರಕಗಳು, ಭಾಗ-2′ ಪ್ರಕಟಗೊಂಡಿವೆ. 10 ವರ್ಷಗಳವರೆಗೆ ಕ್ಷೇತ್ರಕಾರ್ಯ ಮಾಡಿ ಶರಣ ಸ್ಮಾರಕಗಳ ಬಗ್ಗೆ ಸಂಶೋಧನೆ ನಡೆಸಿ ’12ನೇ ಶತಮಾನದ ಶರಣ ಸ್ಮಾರಕಗಳು’ ಎಂಬ ಹೆಸರಿನಡಿ 1700 ಪುಟಗಳ ಮೂರು ಸಂಶೋಧನ ಸಂಪುಟಗಳು ಪ್ರಕಟವಾಗಿವೆ.

ಬೆಡಗಿನ ವಚನಗಳನ್ನು ಕುರಿತು ಪಿಎಚ್‌.ಡಿ ಮಾಡಿದ್ದಾರೆ. 50ಕ್ಕೂ ಮೇಲ್ಪಟ್ಟು ಇವರ ಕೃತಿಗಳು ಪ್ರಕಟವಾಗಿವೆ. ಬೆಡಗಿನ ವಚನಗಳ ಪರಿಭಾಷಾಕೋಶ, ಶರಣ ಜೀವನ, ಫಲದೊಳಗಣ ರುಚಿ, ಶರಣರ ಆರ್ಥಿಕ ಚಿಂತನೆ, ಶರಣರ ಆಯ್ದ ವಚನಗಳ ವ್ಯಾಖ್ಯಾನ ಮಾಲೆಯ 2 ಸಂಪುಟಗಳು, ಲಿಂಗವಂತ- ಈ ಮುಂತಾದ ಕೃತಿಗಳು ಗಮನಾರ್ಹವಾಗಿವೆ. ಕವಿಮಾರ್ಗ ಎನ್ನುವ ತ್ರೈಮಾಸಿಕ ಸಾಹಿತ್ಯಕ ಪತ್ರಿಕೆಯನ್ನು ಕಲಬುರಗಿಯಲ್ಲಿ ಪ್ರಾರಂಭಿಸಿ, ಸಂಪಾದಕ-ಪ್ರಕಾಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರ ಮಹತ್ವದ ಕೃತಿಗಳಿಗೆ 15 ಪ್ರಶಸ್ತಿಗಳು, ಒಟ್ಟು ಸಾಧನೆಗೆ 12 ಪ್ರಶಸ್ತಿಗಳು ಹೀಗೆ ಈಗಾಗಲೇ ಅವರಿಗೆ 27 ಪ್ರಶಸ್ತಿಗಳು ದೊರಕಿವೆ. ಆಳಂದ ತಾಲೂಕಾ ಸಾಹಿತ್ಯ ಸಮ್ಮೇಳನ, ತುಮಕೂರು ಜಿಲ್ಲಾ ಕದಳಿ ಮಹಿಳಾ ವೇದಿಕೆ ‘ರಾಜ್ಯ ಮಟ್ಟದ 8ನೇ ಕದಳಿ ಸಮ್ಮೇಳನ’, ಸೊಲ್ಲಾಪುರದಲ್ಲಿ ‘ಹಳಕಟ್ಟಿ ವಚನೋತ್ಸವ’ ಹಾಗೂ ‘ಡಾ. ಜಯದೇವಿತಾಯಿ ಲಿಗಾಡೆ ಜನ್ಮ ಶತಮಾನೋತ್ಸವ ಸಮ್ಮೇಳನ’ಗಳ ಸರ್ವಾಧ್ಯಕ್ಷತೆಯ ಗೌರವ ಹೊಂದಿದ್ದಾರೆ.

ಶರಣ ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿದ ಅನುಪಮವಾದ ಕೊಡುಗೆಯನ್ನು ಪರಿಗಣಿಸಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅತ್ಯಂತ ಸಂತೋಷದಿಂದ, 2019ನೆಯ ಸಾಲಿನ “ರಮಣಶ್ರೀ ಶರಣ ಪ್ರಶಸ್ತಿ”ಯನ್ನು ನೀಡಿ ಗೌರವಿಸುತ್ತಿವೆ.

ಆಧುನಿಕ ವಚನ ರಚನೆ

ಪ್ರೊ. ಸಿದ್ಧಣ್ಣ ಲಂಗೋಟಿ

ಪ್ರೊ. ಸಿದ್ಧಣ್ಣ ಲಂಗೋಟಿ ಅವರು ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಚಾಂದಕವಠ ಗ್ರಾಮದಲ್ಲಿ 1951ರಲ್ಲಿ ಜನಿಸಿದರು. ಚಾಂದಕವರೆ, ಕನ್ನೊಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಸಿಂದಗಿಯ ಎಚ್.ಜಿ. ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ, ವಿಜಯಪುರ ಬಿ.ಎಲ್.ಡಿ.ಇ. ಸಂಸ್ಥೆಯಲ್ಲಿ ಬಿ.ಎಸ್‌ಸಿ. ಪದವಿ ಶಿಕ್ಷಣ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ತತ್ವಜ್ಞಾನ, ಎಂ.ಎ. ಹಿಂದಿ, ಕನ್ನಡ, ಎಲ್.ಎಲ್.ಬಿ. ಕಾನೂನು ಶಿಕ್ಷಣ, ಸಿ.ವೈ.ಇಡಿ ಯೋಗ ಶಿಕ್ಷಣ ಪಡೆದಿದ್ದಾರೆ.

ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಸಾಹಿತ್ಯ ರಚನೆಯತ್ತ ತೊಡಗಿಸಿಕೊಂಡಿದ್ದಾರೆ. ಭಾರತೀಯ ಹಾಗೂ ಪಾಶ್ಚಿಮಾತ್ಯ ತತ್ವಜ್ಞಾನ ಚಿಂತಕರಾಗಿ, ಬಸವತತ್ವ ಜ್ಞಾನದ ಅನುಭಾವಿ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. 81ಕ್ಕೂ ಮಿಕ್ಕಿ ಗ್ರಂಥಗಳ ರಚನೆ ಹಾಗೂ ಸಂಪಾದನೆ ಮಾಡಿದ್ದಾರೆ.

1990 ಮತ್ತು 2000ರಲ್ಲಿ ಇಂಗ್ಲೆಡ್, ಅಮೇರಿಕಾ, ಫ್ರಾನ್ಸ್, ಇಟಲಿ, ಜರ್ಮನಿ, ಕೆನಡಾ, ಆಸ್ಟ್ರಿಯಾ, ಹಾಲೆಂಡ್, ಸಿಂಗಪೂರ್ ಹಾಗೂ ಅರಬ್ ರಾಷ್ಟ್ರಗಳು ಹೀಗೆ ಪ್ರಪಂಚದ ಪಾಶ್ಚಿಮಾತ್ಯ ಹಾಗೂ ಪ್ರಮುಖ ದೇಶಗಳಲ್ಲಿ ಹಾಗೆಯೇ ದೇಶದ ಹಲವಾರು ರಾಜ್ಯಗಳಲ್ಲೂ ಸಹ ಬಸವತತ್ವಜ್ಞಾನ ಕುರಿತು ಉಪನ್ಯಾಸ ನೀಡಿದ್ದಾರೆ. ‘ಜಗಜ್ಯೋತಿ ಬಸವೇಶ್ವರ’ ಅಂಕಿತದಲ್ಲಿ ಸಾವಿರಾರು ವಚನಗಳನ್ನು ರಚಿಸಿದ್ದಾರೆ.

1977ರಲ್ಲಿ ಬಸವತತ್ವ ಪ್ರಸಾರ ಸಂಸ್ಥೆ ಸ್ಥಾಪಿಸಿ ಫ.ಗು. ಹಳಕಟ್ಟಿಯವರ ಶಿವಾನುಭವ ಪತ್ರಿಕೆಗೆ ಮರುಜನ್ಮ ನೀಡಿದ್ದಾರೆ. ‘ಬಸವ ಬೆಳಗು’ ತ್ರೈಮಾಸಿಕ ಪತ್ರಿಕೆಗೆ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವಾರು ಸಂಘಸಂಸ್ಥೆಗಳು ಮತ್ತು ಪ್ರತಿಷ್ಠಾನಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಮಠಮಾನ್ಯಗಳು, ಸಂಘ ಸಂಸ್ಥೆಗಳು ದೇಶ-ವಿದೇಶಗಳಲ್ಲಿ ಸನ್ಮಾನಿಸಿ ಪ್ರಶಸ್ತಿಗಳನ್ನು ನೀಡಿವೆ.

ಆಧುನಿಕ ವಚನ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಮಹತ್ವದ ಕೊಡುಗೆಯನ್ನು ಮನ್ನಿಸಿ, ಅವರಿಗೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅತ್ಯಂತ ಸಂತೋಷದಿಂದ, 2019ನೆಯ ಸಾಲಿನ “ರಮಣಶ್ರೀ ಶರಣ ಪ್ರಶಸ್ತಿ”ಯನ್ನು ನೀಡಿ ಗೌರವಿಸುತ್ತಿವೆ.

ವಚನ ಸಂಗೀತ ಕ್ಷೇತ್ರ

ಪಂಡಿತ್ ದೇವೇಂದ್ರ ಕುಮಾರ್ ಪತ್ತಾರ್

ಗದಗಿನ ಪೂಜ್ಯ ಡಾ. ಪುಟ್ಟರಾಜ ಗವಾಯಿಗಳ ನೇರ ಶಿಷ್ಯರಾದ ದೇವೇಂದ್ರ ಕುಮಾರ್ ಕಳೆದ ಐದು ದಶಕಗಳಿಂದ ಸಂಗೀತಕ್ಕೆ ತಮ್ಮನ್ನು ಅರ್ಪಿಸಿಕೊಂಡವರು. ಶಿವಮೊಗ್ಗದಲ್ಲಿ ಸಂಗೀತ ಶಿಕ್ಷಕರಾಗಿ ವೃತ್ತಿಯನ್ನು ಆರಂಭಿಸಿ ಸೊಂಡೂರು, ಮುದಗಲ್, ಸಿಂಧನೂರಿನಲ್ಲಿ ಸಂಗೀತದ ತೊರೆಯನ್ನು ನಿರ್ಮಿಸಿದವರು. ಸಿಂಧನೂರಿನಲ್ಲಿದ್ದಾಗಲೆ ನೂರಾರು ಧ್ವನಿಸುರುಳಿಗಳಿಗೆ ಸ್ವರ ಸಂಯೋಜನೆ ಮಾಡಿದವರು. ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ ಸೇರಿದಂತೆ ನಾಡಿನ ಪ್ರಖ್ಯಾತ ಗಾಯಕರುಗಳೆಲ್ಲರ ರಾಗಸಂಯೋಜನೆಯಲ್ಲಿ ಧ್ವನಿ ನೀಡಿರುವ ಎಲೆಮರೆಯ ಸಂಗೀತ ಮಾಂತ್ರಿಕ ಪಂಡಿತ್ ದೇವೇಂದ್ರ ಕುಮಾರ್ ಪತ್ತಾರ್.

ತಮ್ಮ ಗುರುಗಳ ಹೆಸರಿನಲ್ಲಿ ಡಾ. ಪುಟ್ಟರಾಜ ಸಂಗೀತ ವಿದ್ಯಾಪೀಠವನ್ನು ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತಾಭ್ಯಾಸವನ್ನು ಮಾಡಿಸಿದ್ದಾರೆ. ನೂರಾರು ಧ್ವನಿಸಾಂದ್ರಿಕೆಗಳು ಇವರ ಗಾನಸುಧೆಯಲ್ಲಿ ಹೊರಬಂದಿವೆ.

ಮಕ್ಕಳ ಕಲಿಕೆಗಾಗಿಯೇ ‘ಗುರುಶಿಷ್ಯ ಪರಂಪರೆ’ ಎಂಬ ಧ್ವನಿಸಾಂದ್ರಿಕೆಯನ್ನು ಹೊರತಂದಿರುವುದು ವಿಶೇಷ. ಹಲವಾರು ಕವಿಗಳ ರಚನೆಗಳೇ ಅಲ್ಲದೆ ಇವರ ಸಂಗೀತ ಸಂಯೋಜನೆ ಮತ್ತು ಸಿರಿಕಂಠದಲ್ಲಿ ಶಾಸ್ತ್ರೀಯ ಸಂಗೀತ, ವಚನ ಗಾಯನ, ದಾಸವಾಣಿಗಳ ಧ್ವನಿಸುರುಳಿಗಳೂ ನಿರ್ಮಾಣಗೊಂಡಿವೆ.

ಆಕಾಶವಾಣಿ ‘ಬಿ’ ಗ್ರೇಡ್ ಶ್ರೇಣಿಯ ಕಲಾವಿದರಾಗಿರುವ ಇವರು ಜನಮನದ ಗಾಯಕರು. ರಂಗಭೂಮಿ ಕ್ಷೇತ್ರದಲ್ಲಿ ಹತ್ತಾರು ನಾಟಕಗಳಿಗೆ ರಂಗಸಂಗೀತ, ಕಿರುಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ‘ಕೆಂಪೇಗೌಡ ಪ್ರಶಸ್ತಿ’ ನೀಡಿ ಗೌರವಿಸಿದೆ. ನಾಡಿನ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಖಿಲ ಕರ್ನಾಟಕ ಗಾನಯೋಗಿ ಸ್ವರಸಾನಿಧ್ಯ ಟ್ರಸ್ಟ್ (ರಿ)ನ್ನು ಸ್ಥಾಪಿಸಿ, ಸಂಗೀತ ತರಬೇತಿ ನೀಡುತ್ತಿದ್ದಾರೆ.

ಪಂಡಿತ್ ದೇವೇಂದ್ರ ಕುಮಾರ್ ಪತ್ತಾರ್ ಅವರ ಅಪೂರ್ವ ಸಾಧನೆಯನ್ನು ಮನಗಂಡು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು 2019ನೆಯ ಸಾಲಿನ “ರಮಣಶ್ರೀ ಶರಣ ಪ್ರಶಸ್ತಿ’ಯನ್ನು ಅವರಿಗೆ ಅತ್ಯಂತ ಸಂತೋಷದಿಂದ ನೀಡಿ ಗೌರವಿಸುತ್ತಿವೆ.

ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ

ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ

ಗದುಗಿನ ಶ್ರೀ ತೋಂಟದಾರ್ಯ ಸಂಸ್ಥಾನಮಠದ ಹೃದಯಭಾಗ ಪುಸ್ತಕ ಸಂಸ್ಕೃತಿ, ಮೊದಲಿನಿಂದಲೂ ಅನ್ನದಾಸೋಹಕ್ಕೆ ಹೆಸರಾದ ಲಿಂಗಾಯತ ಮಠಗಳು, 20ನೆಯ ಶತಮಾನದಲ್ಲಿ ಕರ್ನಾಟಕಕ್ಕೆ ನೀಡಿದ ದೊಡ್ಡ ಕಾಣಿಕೆ ಶಿಕ್ಷಣ ಹಾಗೂ ದಾಸೋಹ. ಇದರ ಮುಂದುವರಿಕೆ ಪುಸ್ತಕ ದಾಸೋಹ.

ಲಿಂಗಾಯತ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸಿ, ಈ ನಾಲ್ಕು ದಶಕಗಳಲ್ಲಿ ವಿಶ್ವವಿದ್ಯಾಲಯ, ಪ್ರಸಾರಾಂಗಗಳ ರೀತಿಯಲ್ಲಿ ದುಡಿದ ಶ್ರೀಮಠವು ಪ್ರಕಟಿಸುತ್ತಿರುವ ಪುಸ್ತಕಗಳು ಜನಸಾಮಾನ್ಯರ ಹಾಗೂ ವಿದ್ವಜ್ಜನರ ಗಮನ ಸೆಳೆದಿವೆ.

ಈ ಶತಮಾನದ ಲಿಂಗಾಯತ ಪ್ರಕಟಣೆಗಳಲ್ಲಿಯೇ ದೊಡ್ಡ ಸಾಧನೆ ‘ಲಿಂಗಾಯತ ಪುಣ್ಯಪುರುಷ ಮಾಲೆ’ಯ ಕೃತಿಗಳು ಮತ್ತು ವಚನ ಸಾಹಿತ್ಯ ಪ್ರಕಟಣೆಯ ಇತಿಹಾಸದಲ್ಲಿ ಮೂರನೆಯ ಘಟ್ಟವೆಂಬ ಕೀರ್ತಿಗೆ ಪಾತ್ರವಾದ ವಚನ ಸಾಹಿತ್ಯ ಕುರಿತ ಕೃತಿಗಳು.

ಕರ್ನಾಟಕದಲ್ಲಿ ಕೆಲವು ಮಠಗಳು ಅನ್ನದಾಸೋಹಕ್ಕೆ, ಇನ್ನು ಕೆಲವು ಶಿಕ್ಷಣ ದಾಸೋಹಕ್ಕೆ ಹೆಸರಾದರೆ ಗದುಗಿನ ಶ್ರೀಮಠವು ಪುಸ್ತಕ ದಾಸೋಹಕ್ಕೆ ಪ್ರಸಿದ್ಧ, ಕಳೆದ 45 ವರ್ಷಗಳಲ್ಲಿ ಪ್ರಕಟವಾದ ಗ್ರಂಥಗಳ ಸಂಖ್ಯೆ 343. ಇದಲ್ಲದೆ ಲಿಂಗಾಯತ ಪುಣ್ಯಪುರುಷರ ಸಂಪುಟಗಳು, ಮಕ್ಕಳ ಸಾಹಿತ್ಯ ರತ್ನಮಾಲೆ, ಸಂಕೀರ್ಣ ಸಾಹಿತ್ಯ ರತ್ನಮಾಲೆ, ಸರಕಾರದಿಂದ ಪ್ರಕಟಿಸಿದ ಶ್ರೀಮಠದ ಸಾಹಿತ್ಯ ಹಾಗೂ ಶ್ರೀಗಳ/ಶ್ರೀಮಠದ ಬಗ್ಗೆ ಇತರ ಪ್ರಕಟಣೆಗಳೂ ಹೊರಬಂದಿವೆ.

ಶ್ರೀಮಠದ ಶರಣ ಸಂಸ್ಕೃತಿ ಪ್ರಸಾರ ಸಂಸ್ಥೆಯಡಿ ಶರಣ ಸಾಹಿತ್ಯದ ಪ್ರಕಟನೆ ಮತ್ತು ಪ್ರಸಾರದ ಕೈಂಕರ್ಯದಲ್ಲಿ ನಿರತವಾಗಿರುವ ಗದುಗಿನ ಡಾ. ಎಂ.ಎಂ. ಕಲ್ಬುರ್ಗಿ ಅಧ್ಯಯನ ಸಂಸ್ಥೆಯ ಅನುಪಮ ಸೇವೆಯನ್ನು ಮನ್ನಿಸಿ, ಸಂಸ್ಥೆಯ ಅಧ್ಯಕ್ಷರಾಗಿರುವ ಜಗದ್ಗುರು ಶ್ರೀ ಸಿದ್ಧರಾಮ ತೋಂಟದಾರ್ಯ ಮಹಾಸ್ವಾಮಿಗಳವರಿಗೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅತ್ಯಂತ ಸಂತೋಷದಿಂದ, 2019ನೆಯ ಸಾಲಿನ “ರಮಣಶ್ರೀ ಶರಣ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿವೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಉತ್ತೇಜನ ಪ್ರಶಸ್ತಿ

ಶರಣ  ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮಾರ್ಗವನ್ನು ತೋರಿದ ಮತ್ತು ಇತರರಿಗೆ ಪ್ರೇರೇಪಿಸುವ ವ್ಯಕ್ತಿಗಳನ್ನು ಗೌರವಿಸಲಾಯಿತು.

ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರ

ಡಾ. ಕೆ. ರವೀಂದ್ರನಾಥ

ಡಾ. ಕೆ. ರವೀಂದ್ರನಾಥ ಅವರು ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ಅಂಬಳಿ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದರು. ಹೊಸಪೇಟೆ ವಿಜಯನಗರ ಕಾಲೇಜಿನಲ್ಲಿ ಎಂ. ಮರಿಯಪ್ಪ ಭಟ್ ಪ್ರಶಸ್ತಿಯೊಂದಿಗೆ ಪ್ರಥಮ ಸ್ಥಾನದಲ್ಲಿ ಬಿ.ಎ. ಪದವಿಯನ್ನು, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಮೂರು ಚಿನ್ನದ ಪದಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಎಂ.ಎ (ಕನ್ನಡ) ಪದವಿಯನ್ನು ಹಾಗೂ “ಕನ್ನಡ ಸಾಹಿತ್ಯಕ್ಕೆ ಮಠ-ಮಾನ್ಯಗಳ ಸೇವೆ” ಎಂಬ ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

ಹಳಗನ್ನಡ, ವಚನಸಾಹಿತ್ಯ, ಶಾಸನ ಸಾಹಿತ್ಯ, ಹಸ್ತಪ್ರತಿ-ಗ್ರಂಥ ಸಂಪಾದನಶಾಸ್ತ್ರ, ಲಿಂಗಾಯತ ಸಂಸ್ಕೃತಿ ಅಧ್ಯಯನ ಇವರ ಆಸಕ್ತಿ ಅಧ್ಯಯನ ಕ್ಷೇತ್ರಗಳು, ಶರಣರ ಕುರಿತು ಹಸ್ತಪ್ರತಿಗಳ ಶೋಧ ಹಾಗೂ ಅಧ್ಯಯನದಲ್ಲಿ ಕಳೆದ 20 ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಸವಯುಗದ ವಚನೇತರ ಸಾಹಿತ್ಯ, ಉದ್ಧರಣೆ ಸಾಹಿತ್ಯ, ಗುಂಡಬ್ರಹ್ಮಯ್ಯಗಳ ಸಾಹಿತ್ಯ, ಕನ್ನಡ ಟೀಕಾ ಸಾಹಿತ್ಯ, ಶರಣಸಂಸ್ಕೃತಿ ಮಾರ್ಗ, ಅಮರೇಶ್ವರ ಪುರಾಣ, ಸಿದ್ಧರಾಮ ಸಂಪದ, ಕನ್ನಡ ದಾಖಲು ಸಾಹಿತ್ಯ, ಚರಿತ್ರೆ- ಚಾರಿತ್ರ್ಯ, ಹಡಪದ ಅಪ್ಪಣ್ಣ ಇತ್ಯಾದಿ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅಮರಕಲ್ಯಾಣ, ಧರ್ಮಕಲ್ಯಾಣ, ವಚನ ಟೀಕು ಸಾಹಿತ್ಯ : ಒಂದು ಅಧ್ಯಯನ, ವಚನಸಾಹಿತ್ಯ: ಸೃಜನಶೀಲ ಅನುಸಂಧಾನದ ನೆಲೆಗಳು, ನೂರೊಂದು ವಿರಕ್ತರು ; ಒಂದು ಅಧ್ಯಯನ, ಕರ್ನಾಟಕ ಲಿಂಗಾಯತ ರಾಣಿಯರು : ಒಂದು ಅಧ್ಯಯನ, ಶಿವಯೋಗಮಂದಿರ : ಒಂದು ಅಧ್ಯಯನ, ಎಂ.ಎಂ ಕಲಬುರ್ಗಿ ಅವರ ವಚನ ವ್ಯವಸಾಯ, ರೇವಣಸಿದ್ಧ : ಒಂದು ಅಧ್ಯಯನ ಹೆಸರಿನ ಮಹಾಪ್ರಬಂಧಗಳು ಇವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿಗೆ ಅರ್ಹವಾಗಿವೆ.

ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಕೂಡಲ ಸಂಗಮ ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ ಪ್ರಥಮ ಮುಖ್ಯಸ್ಥರಾಗಿ, ಶೈಕ್ಷಣಿಕ ಉಪ ಕುಲಸಚಿವರಾಗಿ, ಅಧ್ಯಯನಾಂಗದ ನಿರ್ದೇಶಕರಾಗಿ, ಸೇವೆ ಸಲ್ಲಿಸಿದ್ದಾರೆ. ಇವರ ಸಾಧನೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

ಶರಣ ಸಾಹಿತ್ಯ ಕುರಿತು ಸಂಶೋಧನೆಯ ಸಾಧನೆ ಮಾಡಿರುವ ಡಾ. ಕೆ. ರವೀಂದ್ರನಾಥ ಅವರಿಗೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅತ್ಯಂತ ಸಂತೋಷದಿಂದ, 2019ನೆಯ ಸಾಲಿನ “ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿವೆ.

ಆಧುನಿಕ ವಚನ ರಚನೆ

ಶ್ರೀಮತಿ ಪುಷ್ಪ ಬಸವರಾಜ ಬಣಕಾರ

ಬಿ.ಎಸ್‌ಸಿ. ಪದವೀಧರೆ, ಗೃಹಿಣಿಯಾಗಿದ್ದರೂ ಸಹ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಒಲವುಳ್ಳವರು. ತಂದೆ ಲಿಂಗೈಕ್ಯ ಡಾ. ಗುದ ರಾಜು ಸರ್ಕಾರಿ ವೈದ್ಯರಾಗಿದ್ದರು. ಸೀತಮ್ಮ ಇವರ ತಾಯಿ, ಕರ್ನಾಟಕ ಸರ್ಕಾರದ ಮಾಜಿ ವಿಧಾನಸಭಾ ಸದಸ್ಯರಾಗಿದ್ದ ಲಿಂಗೈಕ್ಯ ಡಾ. ಮಹಾದೇವ ಬಣಕಾರ ಅವರ ಸೊಸೆ ಶ್ರೀಮತಿ ಪುಷ್ಟ ಬಣಕಾರ ಅವರು.

ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಕೊಪ್ಪಳ, ಕೂಡ್ಲಿಗಿ ಚಿಕ್ಕಹೋಗಿ ಹಳ್ಳಿಯಲ್ಲಾಯಿತು. ಬೆಂಗಳೂರಿನ ವಿದ್ಯಾವರ್ಧಕ ಮಹಿಳಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮತ್ತು ಕೆ.ಎಲ್‌.ಇ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು.

1980ರಲ್ಲಿ ಶ್ರೀ ಬಸವರಾಜ ಬಣಕಾರ ಅವರೊಂದಿಗೆ ವೈವಾಹಿಕ ಜೀವನ ಪ್ರಾರಂಭವಾಯಿತು. ಇವರ ದಾಂಪತ್ಯದ ಬಳ್ಳಿಯಲ್ಲಿ ಆರಳಿದ ಕುಸುಮಗಳು ಪುತ್ರ ಸಂದೀಪ್ ಹಾಗೂ ಪುತ್ರಿ ಅರ್ಪಿತ.

ಬಾಲ್ಯದಿಂದಲೇ ಸಾಹಿತ್ಯದತ್ತ ಒಲವುಳ್ಳ ಇವರು ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಪ್ರಬಂಧ ಹಾಗೂ ಕವನಗಳನ್ನು ರಚಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದವರು. ನಂತರದಲ್ಲಿ ವಚನ ಸಾಹಿತ್ಯದತ್ತ ಗಮನ. ಅವರ ಲೇಖನಿಯಿಂದ ಹೊರಬಂದ ಕೃತಿಗಳು ಹಲವಾರು. ಒಳದನಿ ಕವನ ಸಂಕಲನ, ವಚನ ವಲ್ಲರಿ, 108 ಆಧುನಿಕ ವಚನಗಳು, ಅನುವರ (ಕಾವ್ಯ), ಎನ್ನೊಳಗಣ ಬಸವಪ್ರಭು ಇತ್ಯಾದಿ. 2017ರಲ್ಲಿ ‘ವತ್ಸಲಾ ನಂಜುಂಡಯ್ಯ’ ಶರಣ ದತ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಶ್ರೀಮತಿ ಪುಷ್ಪ ಬಸವರಾಜ ಬಣಕಾರ ಅವರ ಸಾಧನೆಯನ್ನು ಮನ್ನಿಸಿ ಅವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅತ್ಯಂತ ಸಂತೋಷದಿಂದ, 2019ನೆಯ ಸಾಲಿನ “ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ”ಯನ್ನು ನೀಡಿ ಗೌರವಿಸುತ್ತಿವೆ.

ವಚನ ಸಂಗೀತ ಕ್ಷೇತ್ರ

ಕು. ಪಾವನಿ ಕಾಶೀನಾಥ

ಕುಮಾರಿ ಪಾವನಿ ಕಾಶಿನಾಥ್‌ರವರ ಹಿಂದಿನ ಮೂರು ತಲೆಮಾರಿನವರೆಲ್ಲ ಹೆಸರಾಂತ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರಾಗಿದ್ದವರು. ತಂದೆ ವಿದ್ವಾನ್ ಎ.ವಿ. ಕಾಶಿನಾಥ ಹಲವಾರು ಲಯ ವಾದ್ಯಗಳನ್ನು ನುಡಿಸುವಂತಹ ಹೆಸರಾಂತ ಕಲಾವಿದು. ತಾಯಿ ವಿದುಷಿ ಪುಷ್ಪಾ ಕಾಶೀನಾಥ ಕರ್ನಾಟಕದ ಹೆಸರಾಂತ ವೀಣಾವಾದಕರಲ್ಲಿ ಒಬ್ಬರು.

ಅತ್ಯಂತ ಕಿರಿಯ ವಯಸ್ಸಿನಿಂದಲೇ ಸಂಗೀತ ಅಭ್ಯಾಸವನ್ನು ವಿದುಷಿ ಆರ್.ಚಂದಿಕಾರವರಲ್ಲಿ ಆರಂಭಿಸಿ, ನಂತರ ಕಲಾಚಾರ್ಯ ವಿದುಷಿ ನೀಲಾರಾಮ್‌ ಗೋಪಾಲ್‌ರವರಲ್ಲಿ ಹಲವಾರು ವರ್ಷಗಳ ಅಭ್ಯಾಸ ಮುಂದುವರಿಸುತ್ತಿರುವಾಗಲೇ, ವಚನಗಳನ್ನು ಹಾಡಲು ಬೆಳಗಾವಿಯಲ್ಲಿರುವ ಮಾತೆ ಕುಮುದಿನಿ ತಾಯಿಯವರಲ್ಲಿ ಕಲಿತಿದ್ದಾರೆ/ ಕಲಿಯುತ್ತಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಸುರಮಣಿ ದತ್ತಾತ್ರೇಯ ವೇಳಂಕರ್‌ರವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಮೆಡಿಕಲ್ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದು, ಸ್ನಾತಕೋತ್ತರ ಪದವಿ ಸಂಗಿತ’ದಲ್ಲಿ ಪ್ರಥಮ ಬ್ಯಾಂಕ್‌ಗಳಿಸಿ (2019) ಚಿನ್ನದ ಪದಕ ಗಳಿಸಿದ್ದಾರೆ.

16ನೆಯ ವಯಸ್ಸಿನಲ್ಲಿ ‘ಆಕಾಶವಾಣಿ’ಯವರು ಏರ್ಪಡಿಸಿದ್ದ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿ, ಎರಡು ‘ಎ’ ಗ್ರೇಡ್‌ನ್ನು ಒಮ್ಮೆಲೆ ಪಡೆದ ಅತ್ಯಂತ ಕಿರಿಯ ಗಾಯಕರಾಗಿದ್ದಾರೆ.

ಅವಧಾನ ಪಲ್ಲವಿಯಂತಹ ಕ್ಲಿಷ್ಟ ಹಾಗೂ ಅಪರೂಪದ ರಾಗ, ತಾನ, ಪಲ್ಲವಿಯನ್ನು ವಿದ್ವಜ್ಜನರ ಸಮ್ಮುಖದಲ್ಲಿ ಹಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ರಾಜ್ಯಮಟ್ಟದ ವೀಣಾವಾದನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ವೀಣೆಯನ್ನೇ ಪಡೆದದ್ದು ಮತ್ತೊಂದು ವಿಶೇಷ. ಆಕಾಶವಾಣಿ ಏರ್ಪಡಿಸುವ ಸಂಗೀತ ಸಮ್ಮೇಳನದ (2016) ಅಂಗವಾಗಿ ಭಾವಗೀತೆ ಕಾರ್ಯಕ್ರಮ ನೀಡಿದ ಅತ್ಯಂತ ಕಿರಿಯ ವಯಸ್ಸಿನ ಗಾಯಕಿ ಎಂಬ ಹೆಗ್ಗಳಿಕೆ. ಪ್ರತಿಷ್ಠಿತ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯವರು ಏರ್ಪಡಿಸಿದ್ದ ಯುವ ಸಂಗೀತೋತ್ಸವದಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಜಗಮೋಹನೇ ಕೃಷ್ಣ ಎಂಬ ಧ್ವನಿಸುರುಳಿಯನ್ನು ಟೈಮ್ಸ್-ನೌ ಇವರು ಲೋಕಾರ್ಪಣೆ ಮಾಡಿದ್ದಾರೆ. ರಾಗಶ್ರೀ, ಪ್ರತಿಭಾಕಾಂಕ್ಷಿ, ಗಾನರತ್ನಗಳಲ್ಲದೆ ಇನ್ನೂ ಹಲವಾರು ಪ್ರಶಸ್ತಿಗಳು ಸಂದಿವೆ.

ಕು. ಪಾವನಿ ಕಾಶೀನಾಥ ಅವರ ಈ ಸಾಧನೆಯನ್ನು ಮನ್ನಿಸಿ ಅವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅತ್ಯಂತ ಸಂತೋಷದಿಂದ, 2019ನೆಯ ಸಾಲಿನ “ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ”ಯನ್ನು ನೀಡಿ ಗೌರವಿಸುತ್ತಿವೆ.

ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ

ಕು. ಪ್ರತಿಕ್ಷಾ ಕಾಶಿ, ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್

ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯು 1993ರಲ್ಲಿ ರೂಪುಗೊಂಡು ನೃತ್ಯ ಮತ್ತು ಸಂಗೀತ ತರಬೇತಿಯನ್ನು ನೀಡುತ್ತಿದೆ. ಶ್ರೀಮತಿ ವೈಜಯಂತಿ ಕಾಶಿ ಇದರ ಸ್ಥಾಪಕರು, ನೃತ್ಯವನ್ನು ಚಿಕಿತ್ಸೆಯಾಗಿ ಬಳಸಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ನೃತ್ಯದಿಂದ ಚಿಕಿತ್ಸೆ ನೀಡುವುದರ ಮೂಲಕ ಆತ್ಮಸ್ಥೆರ್ಯ ತುಂಬಿದ್ದಾರೆ. ಬುದ್ದಿಮಾಂದ್ಯ ಮಕ್ಕಳಿಗಾಗಿ ನೃತ್ಯ ಚಿಕಿತ್ಸಾ ಶಿಬಿರವನ್ನು ನಡೆಸುತ್ತಾ ಬಂದಿದ್ದಾರೆ. ಇವರು ಬಿಳಿಬಟ್ಟೆ ಮೇಲೆ ನಾಟ್ಯವಾಡುತ್ತಲೇ ನವಿಲಿನ ಚಿತ್ರವನ್ನು ಕಾಲಿನಿಂದ ಬಿಡಿಸಬಲ್ಲ ಅಪೂರ್ವ ಕಲಾವಿದೆ.

ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯು ತನ್ನ ಅಸ್ತಿತ್ವವನ್ನು ಕಲೆಗಳ ಪ್ರಚಾರ, ಪ್ರಸಾರ ಮತ್ತು ತರಬೇತಿಯ ಕೇಂದ್ರವಾಗಿ ಮರು ವ್ಯಾಖ್ಯಾನಿಸಿದೆ. ಖಾಸಗಿ ಅಥವಾ ಸರ್ಕಾರದಿಂದ ಯಾವುದೇ ದೇಣಿಗೆ ಪಡೆಯದೆ ಬೆಂಗಳೂರಿನ ಕೆಂಗೇರಿಯಲ್ಲಿ ಅತ್ಯಂತ ಸುಂದರ ಹಾಗೂ ಸುಸಜ್ಜಿತವಾದ ರಂಗಮಂದಿರವನ್ನು ನಿರ್ಮಿಸಲಾಗಿದೆ.

ಮೊಟ್ಟಮೊದಲ ಬಾರಿಗೆ ನೃತ್ಯ ಆಕಾಂಕ್ಷಿಗಳಿಗೆ ಸರ್ಟಿಫಿಕೇಟ್‌ ಕೋರ್ಸ್‌ಗಳ ಮೂಲಕ ಕೂಚಿಪುಡಿ ತರಬೇತಿ ನೀಡಲಾಗುತ್ತಿದೆ. ಧಾರವಾಡ, ರಾಣೆಬೆನ್ನೂರು, ಕೇರಳ ಹಾಗೂ ಬೆಂಗಳೂರಿನಲ್ಲಿ ಐದು ಶಾಖೆಗಳನ್ನು ಹೊಂದಿದ್ದು, ವಿದೇಶಗಳಲ್ಲಿಯೂ ಸಹ ಅನೇಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.

ನೃತ್ಯ ಕ್ಷೇತ್ರದ ದಿಗ್ಗಜರುಗಳಿಗೆ ಪ್ರತಿವರ್ಷ ನಾಟ್ಯಶಾಸ್ತ್ರ ಪ್ರಶಸ್ತಿಯನ್ನು ನೀಡುತ್ತಿದ್ದು, ಪದ್ಮವಿಭೂಷಣ ವೈಜಯಂತಿಮಾಲಾ ಬಾಲಿ, ಪದ್ಮಭೂಷಣ ಯಾಮಿನಿ ಕೃಷ್ಣಮೂರ್ತಿ, ಪದ್ಮಶ್ರೀ ಶೋಭಾ ನಾಯ್ಡು, ಶ್ರೀಮತಿ ಉಮಾರಾವ್ ಮತ್ತು ಶ್ರೀಮತಿ ಸುಮತಿ ಕೌಶಾಲ್‌ರವರುಗಳಿಗೆ ಈವರೆಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಪ್ರದರ್ಶನ, ತರಬೇತಿ, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಕಾರ್ಯಕ್ರಮಗಳು, ಕೂಚಿಪುಡಿ ಕಾರ್ಯಾಗಾರ, ಉಪನ್ಯಾಸ-ಪ್ರದರ್ಶನ, ಸಂಶೋಧನೆ, ಪುರಾಣ, ಐತಿಹಾಸಿಕ, ನೀತಿಕಥೆ, ಕಾಲ್ಪನಿಕ ಮತ್ತು ಸೃಜನಶೀಲ ನೃತ್ಯಗಳ ಮೂಲಕ ಯುವಜನರ ಆಕರ್ಷಣೆ – ಕೂಚಿಪುಡಿಯಲ್ಲಿ ಮಹಿಳೆಯರ ಕೊಡುಗೆ, ವಿಶ್ವನೃತ್ಯದಿನ, ಯುವನೃತ್ಯ ಉತ್ಸವ, ಗೆಜ್ಜೆನಾದ ವಾರ್ಷಿಕ ನೃತ್ಯೋತ್ಸವ ಏಕವ್ಯಕ್ತಿ ಮತ್ತು ಯುಗಳಗೀತೆಗಳ ಪ್ರಸ್ತುತಿಯ ಮೂಲಕ ಯುವಜನತೆಗೆ ತರಬೇತಿಯನ್ನು ಮತ್ತು ಯುವ ಪ್ರತಿಭೆಗಳನ್ನು ಉತ್ತೇಜಿಸಲು ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್ ಶ್ರಮಿಸುತ್ತಿದೆ. ಸುಮಾರು 20 ವರ್ಷಗಳಿಂದ ಹಲವಾರು ಶರಣರ ವಚನಗಳಿಗೆ ನೃತ್ಯ ರೂಪಕಗಳನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದಿದೆ.

ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯ ಈ ಸೇವೆಯನ್ನು ಮನ್ನಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನಗಳು ಅವರಿಗೆ ಅತ್ಯಂತ ಸಂತೋಷದಿಂದ, 2019ನೆಯ ಸಾಲಿನ “ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ”ಯನ್ನು ನೀಡಿ ಗೌರವಿಸುತ್ತಿವೆ.

ರಮಣಶ್ರೀ ಶರಣ ಪ್ರಶಸ್ತಿಗಳು

ಗ್ಯಾಲರಿ

ಪ್ರಶಸ್ತಿ ಸಮಾರಂಭದಿಂದ ಸೆರೆಹಿಡಿದ ಕ್ಷಣಗಳನ್ನು ಚಿತ್ರಗಳ ಮೂಲಕ ವೀಕ್ಷಿಸಿ.